ಬೆಂಗಳೂರು,ಅ.5- ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕರ್ನಾಟಕದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಪ್ರಕ್ರಿಯೆ ಇದೀಗ ವೇಗ ಪಡೆದುಕೊಂಡಿದ್ದು, ಡಿಸೆಂಬರ್ 15ರೊಳಗೆ ಚುನಾವಣೆ ನಡೆಸುವ ಸಾಧ್ಯತೆ ಇದೆ. ಚುನಾವಣೆಗೆ ಅಗತ್ಯವಿರುವ ಮೀಸಲಾತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
ಜಿಪಂ ಮತ್ತು ತಾಪಂ ಚುನಾವಣೆಗಳು 2021ರಲ್ಲೇ ನಡೆಯಬೇಕಾಗಿತ್ತು. ಆದರೆ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿಗೆ ಸಂಬಂಧಿಸಿದ ವಿಚಾರಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು.ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ದಾಖಲೆಗಳಲ್ಲಿಯೂ ಕರ್ನಾಟಕದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು 2021ರ ಫೆಬ್ರವರಿಯಲ್ಲಿ ನಡೆಯಬೇಕಿದ್ದರೂ ವಿಳಂಬವಾಗಿರುವುದನ್ನು ದಾಖಲಿಸಲಾಗಿದೆ.
ಈ ವರ್ಷ ಹಲವು ಹಂತಗಳಲ್ಲಿ ಸರ್ಕಾರ ಚುನಾವಣೆ ನಡೆಸುವ ಕುರಿತು ದಿನಾಂಕಗಳನ್ನು ಸೂಚಿಸುತ್ತಾ ಬಂದಿದೆ. ಜುಲೈನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪಂಚಾಯಿತಿ ಚುನಾವಣೆ ನಡೆಸುವ ಉದ್ದೇಶವಿದೆ ಎಂದು ಹೇಳಿದ್ದರು.
ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ ಬಳಿಕ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸೆಂಬರ್ 2026ರೊಳಗೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸುವ ಉದ್ದೇಶಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಚುನಾವಣೆಗೆ ಅಗತ್ಯವಿರುವ ಮತಪೆಟ್ಟಿಗೆಗಳ ಖರೀದಿ ಹಾಗೂ ವೆಬ್‌ಕಾಸ್ಟಿಂಗ್ ವ್ಯವಸ್ಥೆಗೂ ಸಂಪುಟ ಆಡಳಿತಾತಕ ಅನುಮೋದನೆ ನೀಡಿದೆ.
ಮೀಸಲಾತಿ ಪಟ್ಟಿಯತ್ತ ಎಲ್ಲರ ಚಿತ್ತ
ಚುನಾವಣೆಯ ಪ್ರಮುಖ ಪೂರ್ವಸಿದ್ಧತೆಯಾಗಿರುವ ಕ್ಷೇತ್ರವಾರು ಮೀಸಲಾತಿ ಪ್ರಕ್ರಿಯೆ ಇದೀಗ ಅಂತಿಮ ಹಂತದಲ್ಲಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಜಿಪಂ-ತಾಪಂ ಚುನಾವಣೆ ಕುರಿತು ಚರ್ಚೆಯಾಗಿದ್ದು, ಶಾಸಕರು ನೀಡಿದ ಕೆಲವು ಸಲಹೆಗಳನ್ನು ಪರಿಗಣಿಸಲಾಗಿದೆ.
ಸರ್ಕಾರ ಅಂತಿಮ ನಿರ್ಧಾರ ಕೈಗೊಂಡ ಬಳಿಕ ರಾಜ್ಯ ಚುನಾವಣಾ ಆಯೋಗ ಚುನಾವಣಾ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಆರಂಭಿಸಲಿದೆ. ಮೀಸಲಾತಿ ಪ್ರಕಟವಾದ ನಂತರ ಯಾವ ಕ್ಷೇತ್ರದಲ್ಲಿ ಯಾವ ವರ್ಗಕ್ಕೆ ಸ್ಥಾನ ಮೀಸಲಾಗಲಿದೆ ಎಂಬುದು ಸ್ಪಷ್ಟವಾಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರ ಮೀಸಲಾತಿಯ ಜೊತೆಗೆ ಸ್ಥಾನಗಳ ಆವರ್ತನೆ ಕೂಡ ಅಭ್ಯರ್ಥಿಗಳ ಆಯ್ಕೆಯ ಮೇಲೆ ಪರಿಣಾಮ ಬೀರಲಿದೆ. ಪಂಚಾಯಿತಿ ರಾಜ್ ಕಾಯ್ದೆಯಡಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ಹಾಗೂ ಆವರ್ತನೆಗೆ ಸಂಬಂಧಿಸಿದ ನಿಯಮಗಳು ಜಾರಿಯಲ್ಲಿವೆ.
ಇವಿಎಂ ಬದಲು ಬ್ಯಾಲೆಟ್ ಪೇಪರ್
ಜಿಪಂ ಮತ್ತು ತಾಪಂ ಸೇರಿದಂತೆ ಪಂಚಾಯಿತಿ ರಾಜ್ ಚುನಾವಣೆಗಳಲ್ಲಿ ಈ ಬಾರಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಯಾಗಲಿದೆ. ಇದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಪಂಚಾಯಿತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಂಡಿದೆ. ಸುಮಾರು 1.20 ಲಕ್ಷ ಮತಪೆಟ್ಟಿಗೆಗಳ ಖರೀದಿಗೆ 151.31 ಕೋಟಿ ವೆಚ್ಚಕ್ಕೆ ಆಡಳಿತಾತಕ ಅನುಮೋದನೆ ನೀಡಲಾಗಿದೆ.ಚುನಾವಣಾ ಪ್ರಕ್ರಿಯೆಯ ನೇರ ವೆಬ್‌ಕಾಸ್ಟಿಂಗ್ ವ್ಯವಸ್ಥೆಗೂ ಹಣ ಮೀಸಲಿಡಲಾಗಿದೆ.
ಗ್ರಾಮೀಣ ರಾಜಕೀಯಕ್ಕೆ ಹೊಸ ವೇದಿಕೆ
ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆ ಗ್ರಾಮೀಣ ರಾಜಕೀಯ ಚಟುವಟಿಕೆಗಳೂ ಚುರುಕುಗೊಳ್ಳುವ ಸಾಧ್ಯತೆ ಇದೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಗ್ರಾಮೀಣ ಆಡಳಿತದ ಪ್ರಮುಖ ಹಂತಗಳಾಗಿರುವುದರಿಂದ ಈ ಚುನಾವಣೆಗಳು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳ ಸಂಘಟನಾ ಸಾಮರ್ಥ್ಯಕ್ಕೆ ಪರೀಕ್ಷೆಯ ವೇದಿಕೆಯಾಗಲಿವೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯ ನಾಯಕರ ಪ್ರಭಾವ, ಪಕ್ಷದ ಸಂಘಟನೆ, ಸಾಮಾಜಿಕ ಮತ್ತು ಪ್ರಾದೇಶಿಕ ಸಮೀಕರಣಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಮೀಸಲಾತಿ ಪಟ್ಟಿ ಪ್ರಕಟವಾದ ಬಳಿಕ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರವೂ ಬದಲಾಗುವ ನಿರೀಕ್ಷೆಯಿದೆ. 2028ರ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯಲಿರುವ ಪ್ರಮುಖ ಸ್ಥಳೀಯ ಚುನಾವಣೆಗಳಾಗಿರುವುದರಿಂದ ಪಕ್ಷಗಳು ಗ್ರಾಮೀಣ ಮಟ್ಟದ ಸಂಘಟನೆ ಬಲಪಡಿಸಲು ಇದನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇದೆ.
