ಬೆಂಗಳೂರು, ಏ.4- ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಹೇಳಿಕೆ ನೀಡಿ ಸುಮಲತಾ ಅವಶ್ಯಕತೆ ತಮಗೆ ಇಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ತಮಗೂ ಯಾರ ಅವಶ್ಯಕತೆಯೂ ಇಲ್ಲ ಎಂದು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯಕ್ಕೆ ತೆರಳುವ ಮುನ್ನಾ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಶ್ಯಕತೆ ಅವರಿಗೆ ಇಲ್ಲ ಎಂದು ಹೇಳಿದಂತೆಯೇ, ನನಗೂ ಯಾರ ಅವಶ್ಯಕತೆಯೂ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರೆ ಸುಮಲತಾ ಏಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಯಾರು ಕುಂಬಳ ಕಾಯಿ ಕಳ್ಳ ಎಂದು ದೇಶಕ್ಕೆ ಗೊತ್ತಿದೆ. ಈ ಹಂತದಲ್ಲಿ ಅವರು ಒಂದು ರೀತಿ ಹೇಳಿಕೆ ನೀಡುವುದು, ನಾನು ಮತ್ತೊಂದು ರೀತಿ ಹೇಳುವುದು ಬೇಕಿಲ್ಲ. ಮಂಡ್ಯಲೋಕಸಭಾ ಕ್ಷೇತ್ರ ಕುರಿತು ನನ್ನ ನಿರ್ಧಾರವನ್ನು ಅಲ್ಲಿ ಸಭೆ ನಡೆಸಿದ ಬಳಿಕವೇ ಪ್ರಕಟಿಸುತ್ತೇನೆ ಎಂದು ಹೇಳಿದರು.
ಮೊನ್ನೆ ತಮ್ಮನ್ನು ಭೇಟಿ ಮಾಡಿದ ಮಂಡ್ಯದ ಕಾರ್ಯಕರ್ತರು ಮೂರ್ನಾಲ್ಕು ರೀತಿಯ ಅಭಿಪ್ರಾಯಗಳನ್ನು ನೀಡಿದ್ದಾರೆ. ಕೆಲವು ನಾಯಕರ ಜೊತೆಗೆ ರಹಸ್ಯ ಸಭೆ ನಡೆದಿದೆ. ಅದನ್ನೆಲ್ಲಾ ಬಹಿರಂಗ ಪಡಿಸಲಾಗುವುದಿಲ್ಲ. ಕೆಲವರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಜೆಡಿಎಸ್‍ನ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ನಾವು ಅಧಿಕಾರಕ್ಕೆ ರಾಜಕೀಯವಾಗಿ ಅಂಟಿಕೊಂಡಿಲ್ಲ. ತಮ್ಮ ಪತಿ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ವಿವಾದ ಸೃಷ್ಟಿಯಾಗಿತ್ತು. ಎರಡೇ ತಿಂಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2018ರಲ್ಲಿ ಕಾಂಗ್ರೆಸ್ ಕೊಟ್ಟ ಬಿ-ಫಾರಂ ಅನ್ನು ವಾಪಸ್ ನೀಡಿದ್ದರು. ಅವರಂತೆಯೇ ನಾವು ಸ್ವಾರ್ಥ ರಾಜಕಾರಣ ಮತ್ತು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದ ಸುಮಲತಾ, ಇಂದು ಮಂಡ್ಯದ ಸಭೆಗೆ ತಮ್ಮೊಂದಿಗೆ ದರ್ಶನ್ ಮತ್ತು ಅಭಿಷೇಕ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.