ಬೆಂಗಳೂರು,ಫೆ.14- ಕೇಂದ್ರದಿಂದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿರುವ ಕಾಂಗ್ರೆಸ್ ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ಅಭಿಯಾನವನ್ನು ತೀವ್ರಗೊಳಿಸಲು ಮುಂದಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಘೋಷಣೆಗೆ ಬಿಜೆಪಿ ನಾನಾ ರೀತಿಯ ವ್ಯಾಖ್ಯಾನ ಮಾಡಿದೆ. ರಾಜ್ಯಸರ್ಕಾರದಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆದ ವೇಳೆ ಸಂಸತ್‍ನಲ್ಲಿ ಬಿಜೆಪಿಯ ಸಂಸದರು ಕೆಂಡಾಮಂಡಲದ ಟೀಕೆಗಳನ್ನು ಮಾಡಿ ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸದಸ್ಯರಿಗೆ ಮಾತನಾಡಲು ಅವಕಾಶ ನಿರಾಕರಿಸಿ ಏಕಪಕ್ಷೀಯ ಅಭಿಪ್ರಾಯ ಗಟ್ಟಿಗೊಳ್ಳುವಂತೆ ಮಾಡುವ ಪ್ರಯತ್ನಗಳಾಗಿವೆ. ಅದಕ್ಕೆ ಎದುರೇಟು ನೀಡಲು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನನ್ನ ತೆರಿಗೆ ನನ್ನ ಹಕ್ಕು ಟ್ವೀಟರ್ ಸಂವಾದದಲ್ಲಿ ಭಾಗವಹಿಸಿ ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ನನ್ನ ತೆರಿಗೆ ನನ್ನ ಹಕ್ಕು ಎಂಬುದು ದೇಶ ವಿಭಜನೆಯ ಪ್ರಯತ್ನ ಎಂದು ಬಿಜೆಪಿ ಟೀಕಿಸುತ್ತಿದೆ.
ಇದಕ್ಕೆ ಎದುರೇಟು ಎಂಬಂತೆ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಿಂದಾಗುತ್ತಿರುವ ತೆರಿಗೆ ಪಾಲಿನ ಅನ್ಯಾಯಗಳ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮುಂದಿಟ್ಟು ತಿರುಗೇಟು ನೀಡಲು ತಯಾರಿ ನಡೆಸಿದೆ. ರಾಜ್ಯದಿಂದ ಬಿಜೆಪಿಯ 25, ಜೆಡಿಎಸ್‍ನ 1 ಪಕ್ಷೇತರ ಒಬ್ಬರು ಸೇರಿ 27 ಸಂಸದರು ಕೇಂದ್ರದ ಆಡಳಿತಾರೂಢ ಸರ್ಕಾರಕ್ಕೆ ಬೆಂಬಲವಾಗಿದ್ದರು. ರಾಜ್ಯಕ್ಕಾದ ತೆರಿಗೆ ಅನ್ಯಾಯದ ಬಗ್ಗೆ ಧ್ವನಿಯೆತ್ತಲಿಲ್ಲ ಎಂಬುದನ್ನು ಗಟ್ಟಿಯಾಗಿ ಹೇಳಲು ಕಾಂಗ್ರೆಸ್ ನಿರ್ಧರಿಸಿದೆ.
ಮಾಜಿ ಸಚಿವ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಹೆಸರು ಹೇಳಿಕೊಂಡು ಮತ ಪಡೆದ ಸಂಸದರು ಪಕ್ಷ ನಿಷ್ಠರಾಗಿದ್ದಾರೇ ಹೊರತು ರಾಜ್ಯಕ್ಕಾಗಿರುವ ಅನ್ಯಾಯಕ್ಕೆ ಒಂದು ದಿನವೂ ಬಾಯಿ ಬಿಡಲಿಲ್ಲ. ಈಗ ಮತ್ತೊಮ್ಮೆ ಮೋದಿ ಹೆಸರಿನಲ್ಲೇ ಮತ ಕೇಳಲು ಮುಂದಾಗಿದ್ದಾರೆ. ರಾಜ್ಯಕ್ಕೆ ಮೋದಿ ಭಕ್ತರು ಮಾತ್ರ ಬೇಕೋ ಅಥವಾ ನ್ಯಾಯ ಕೊಡಿಸುವ ಜನಪ್ರತಿನಿಧಿಗಳು ಬೇಕೋ ಎಂಬುದನ್ನು ಜನರು ನಿರ್ಧರಿಸಬೇಕು ಎಂದು ಕಾಂಗ್ರೆಸ್ ವ್ಯಾಖ್ಯಾನಿಸುತ್ತಿದೆ.
ಇಂದಿನಿಂದ ಆರಂಭವಾಗಬೇಕಿದ್ದ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ರದ್ದು
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಸಾರಾಂಧೋಲನ ನಡೆಸಲು ಸಿದ್ಧತೆ ಕೈಗೊಂಡಿದೆ. ಸಾಮಾಜಿಕ ಜಾಲಾತಾಣದ ಅಭಿಯಾನ ಸಂವಾದಗಳು ಜನರ ಪ್ರಶ್ನೆಗಳಿಗೆ ಮತ್ತು ಗೊಂದಲಗಳಿಗೆ ಸ್ಪಷ್ಟ ಉತ್ತರ ನೀಡುವ ಮೂಲಕ ನನ್ನ ತೆರಿಗೆ ನನ್ನ ಹಕ್ಕು ಅಭಿಯಾನವನ್ನು ರ್ನಿಧಿಷ್ಟ ಗುರಿಯೆಡೆಗೆ ಕೊಂಡೊಯ್ಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಣೆಗಾರಿಕೆ ಹೊತ್ತಿದ್ದಾರೆ. ಇಂದಿನ ಸಂವಾದದಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸವಿಸ್ತಾರವಾದ ಮತ್ತಷ್ಟು ಮಾಹಿತಿಗಳನ್ನು ಮುಖ್ಯಮಂತ್ರಿ ನೀಡಲಿದ್ದಾರೆ ಎಂದು ಹೇಳಲಾಗಿದೆ.