ಬೆಂಗಳೂರು, ಏ.1- ಬೇಸಿಗೆ ಸುಡು ಬಿಲಿಸಿನಿಂದಾಗಿ ವಾತಾವರಣದಲ್ಲಿರುವ ತೇವಾಂಷದಲ್ಲಿ ಗಣನೀಯ ಕುಸಿತವಾಗಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ.ತೇವಾಂಶ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆಯಾಸ, ಬಳಲಿಕೆ ಹೆಚ್ಚಾಲಿದೆ. ಅದರಲ್ಲೂ ವಯಸ್ಸಾದ ಹಿರಿಯ ನಾಗರಕರು ಹಾಗು ಮಕ್ಕಳು ಹೆಚ್ಚು ತೊಂದರೆ ಒಳಗಾಗುತ್ತಾರೆಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಮುಂಗಾರು ಹಿಂಗಾರು ಮಳೆ ಕೈಕೊಟ್ಟು ತೀವ್ರ ಸ್ವರೂಪದ ಬರ ಪರಿಸ್ಥತಿ ಆವರಿಸಿದೆ. ಇದರ ಬೆನ್ನಲ್ಲೆ ಕಳೆದ ಮೂರು ತಿಂಗಳಿಂದ ಮುಂಗಾರು ಪೂರ್ವ ಮಳೆ ವಾಡಿಕೆ ಪ್ರಮಾಣದಲ್ಲಿ ಆಗಿಲ್ಲ.ಮಾರ್ಚ್‍ನಲ್ಲಿ ಕರಾವಳಿ, ಮಲೆನಾಡು ಸೇರಿದಂತ ಒಂದೆರಡು ಕಡೆ ಸಾಧಾರಾಣ ಮಳೆಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹವಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮುಂದಿನ ಒಂದುವಾರದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಒಣ ಹವೆ ಮುಂದುವರೆಯಲಿದ್ದು, ತಾಪಮಾನದಲ್ಲಿ ಸರಾಸರಿ 2 ಡಿಗ್ರಿ ಸೆಂಟಿಗ್ರೇಡ್‍ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್. ಪ್ರಕಾಶ್ ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ 36 ಡಿಗ್ರಿ ಸೆಂಟಿಗ್ರೇಡ್ ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈ ವಾರದಲ್ಲಿ 37 ರಿಂದ 38 ಡಿ.ಸೆ. ತಲುಪುವ ನಿರೀಕ್ಷೆಯಿದೆ. ಸದ್ಯಕ್ಕೆ ಮಳೆಬರುವಂತಹ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮಧ್ಯಾಹ್ನದ ವೇಳೆ ತೇವಾಂಶ ಶೇ.25ಕ್ಕೆ ಇಳಿಕೆ ಯಾಗಲಿದೆ. ಇದರಿಂದ ಜನರಲ್ಲಿ ಸಹಜವಾಗಿ ಬಳಲಿಕೆ ಕಂಡುಬರಲಿದೆ. ಒಣಹವೆ ಇರುವುದರಿಂದ ಕೆಲವೆಡೆ ಬಿಸಿ ಗಾಳಿ ಕಂಡುಬರುತ್ತಿದೆ ಎಂದರು.ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬಾಗಲಕೋಟೆಯಲ್ಲಿ 41.2 ಡಿ.ಸೆ.ನಷ್ಟು ಗರಿಷ್ಠ ತಾಪಮಾನ ದಾಖಲಾಗಿದ್ದರೇ, ಮಡಿಕೇರಿಯಲ್ಲಿ 33 ಡಿ.ಸೆ.ನಷ್ಟಿದೆ.
ಉಳಿದಂತೆ ಚಾಮರಾಜನಗರ 37.3, ಮಂಡ್ಯ-ಮೈಸೂರು 36.6, ಶಿವಮೊಗ್ಗ 37.8, ಬೆಳಗಾವಿ 36.5, ಬೀದರ್ 38.4, ವಿಜಪುರ 38.5, ಕೊಪ್ಪಳ 39.7, ರಾಯಚೂರು 39.6, ಬೆಂಗಳೂರು 35.4ರಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ.