ಬೆಂಗಳೂರು, ಏ.18- ಶ್ರೀರಾಮನವಮಿ ಆಚರಿಸಿ ಯುವಕರು ಕಾರಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಕಾರು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಫರ್ಮಾನ್, ಸಮೀರ್ ಹಾಗೂ ಇಬ್ಬರು ಅಪ್ರಾಪ್ತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಮೂವರು ಯುವಕರು ಶ್ರೀರಾಮನವಮಿ ಅಂಗವಾಗಿ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಕಾರಿನಲ್ಲಿ ಶ್ರೀರಾಮ್ ಬಾವುಟ ಹಿಡಿದು ಜೈ ಶ್ರೀರಾಮ್ ಎಂದು ಜೈಕಾರ ಹಾಕುತ್ತಾ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಮಾರ್ಗವಾಗಿ ಹೋಗುತ್ತಿದ್ದಾಗ ಅನ್ಯಕೋಮಿನ ಯುವಕರು ಏಕಾಏಕಿ ಕಾರಿನ ಬಳಿ ಹೋಗಿ ಅಡ್ಡಗಟ್ಟಿ ಜೈ ಶ್ರೀರಾಮ್ ಬದಲು ಅಲ್ಲಾ ಹೂ ಅಕ್ಬರ್ ಎಂದು ಕೂಗುವಂತೆ ಒತ್ತಾಯಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪುಂಡಾಟ ಮೆರೆದಿದ್ದಾರೆ.
ಆ ಸಂದರ್ಭದಲ್ಲಿ ಕಾರಿನಲ್ಲಿದ್ದ ಯುವಕರು ಆ ರೀತಿ ಕೂಗಲು ನಿರಾಕರಿಸಿದಾಗ ನಾಲ್ವರು ಸೇರಿಕೊಂಡು ಹಲ್ಲೆ ನಡೆಸಿ ದಾಂದಲೆ ಮಾಡಿದ್ದಾರೆ.ಇದೀಗ ಈ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.ಘಟನೆ ಸಂಬಂಧ ಬಿಜೆಪಿ ಮುಖಂಡರು ನಾಲ್ವರ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ದಾವಿಸಿದ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಘಟನೆ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾರಿನಲ್ಲಿ ಮೂವರು ಯುವಕರು ಬಾವುಟ ಹಿಡಿದು ಹೋಗುವಾಗ ಜೈ ಶ್ರೀರಾಮ್ ಎಂದಿದ್ದಾರೆ.
ಆ ಸಂದರ್ಭದಲ್ಲಿ ಇಬ್ಬರು ಯುವಕರು ಕಾರು ಅಡ್ಡಗಟ್ಟಿ ಜೈ ಶ್ರೀರಾಮ್ ಎಂದು ಏಕೆ ಕೂಗುತ್ತೀರಾ, ಅಲ್ಲಾ ಅನ್ನಿ ಎಂದು ಗಲಾಟೆ ಮಾಡಿ ಇನ್ನಷ್ಟು ಯುವಕರನ್ನು ಸ್ಥಳಕ್ಕೆ ಕರೆತಂದು ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಘಟನಾ ಸ್ಥಳದಲ್ಲಿ ಸ್ಥಳೀಯ ಪೊಲೀಸರ ಜೊತೆ 2 ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದ್ದು, ಸೂಕ್ತ ಬಂದೋಬಸ್ತ್ ಮಾಡಲಾಗಿದೆ.