Friday, December 13, 2024
Homeರಾಜ್ಯವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ರಾಮೋಜಿಗೌಡ ಬಿ.ಡಿ.ಶ್ರೀನಿವಾಸ್‌ ನಾಮಪತ್ರ ಸಲ್ಲಿಕೆ

ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ರಾಮೋಜಿಗೌಡ ಬಿ.ಡಿ.ಶ್ರೀನಿವಾಸ್‌ ನಾಮಪತ್ರ ಸಲ್ಲಿಕೆ

ಬೆಂಗಳೂರು, ಮೇ 13- ಶಿಕ್ಷಕರು ಹಾಗೂ ಪದವೀಧರರ 6 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಬೆಂಗಳೂರು ನಗರ ಪದವೀಧರ ಕ್ಷೇತ್ರದ ರಾಮೋಜಿಗೌಡ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿ.ಡಿ.ಶ್ರೀನಿವಾಸ್‌ ಅವರು ಇಂದು ನಾಮಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್‌.ಮುನಿಯಪ್ಪ, ಮಧು ಬಂಗಾರಪ್ಪ, ಸಂಸದ ಡಿ.ಕೆ.ಸುರೇಶ್‌, ವಿಧಾನಪರಿಷತ್‌ ಸದಸ್ಯರಾದ ಪುಟ್ಟಣ್ಣ, ನಸೀರ್‌ ಅಹಮ್ಮದ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ರಾಮೋಜಿಗೌಡ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಶಾಂತಿನಗರದಲ್ಲಿರುವ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿ ಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಯಲ್ಲಿ ನಾಮಪತ್ರ ಸಲ್ಲಿಸಿದರು.

ಬಳಿಕ ಹೊಂಬೇಗೌಡ ನಗರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಯವರು, ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. 6 ತಿಂಗಳ ಮೊದಲೇ ನಾವು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೆವು. ಈಗಾಗಲೇ ಒಂದು ಸುತ್ತು ಅವರು ಮತದಾರರನ್ನು ಸಂಪರ್ಕಿಸಿದ್ದಾರೆ. ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಆಯಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ. ಹಿಂದೆ ಶಿಕ್ಷಕರಿಗಾಗಲೀ, ಪದವೀಧರರಿಗಾಗಲೀ ಯಾವುದೇ ಅನುಕೂಲ ಮಾಡಿಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಪದವೀಧರರಿಗೆ ಸಹಾಯ ಮಾಡಿದೆ. ಎನ್‌ಇಪಿ ಪರಿಷ್ಕರಣೆ, ಎಸ್‌ಇಪಿ ಜಾರಿ ಸೇರಿದಂತೆ ಶಿಕ್ಷಕರಿಗೆ ಹಲವು ವಿಚಾರಗಳನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ತಿಳಿಸಿದೆ ಎಂದು ಹೇಳಿದರು.

ಶಿಕ್ಷಕರಿಗೆ ಮತ್ತು ಪದವೀಧರರಿಗೆ ಅನುಕೂಲ ಮಾಡಿಕೊಡುವುದು ತಮ್ಮ ಜವಾಬ್ದಾರಿ. ನಮ್ಮ ಪಕ್ಷಕ್ಕೆ ಮತ ಹಾಕುವುದು ಅವರ ಕರ್ತವ್ಯ. ಅವರಿಗೆ ಕೆಲಸ ಆಗಬೇಕಿದೆ, ನಮಗೆ ಮತ ಬೇಕಿದೆ ಎಂದು ಹೇಳಿದರು.ಈ ಹಿಂದಿನ ಚುನಾವಣೆಯಲ್ಲಿ ಪ್ರಕಾಶ್‌ ಹುಕ್ಕೇರಿ ಮತ್ತು ಮಧು ಮಾದೇಗೌಡರು ಗೆದ್ದ ಮಾದರಿಯಲ್ಲಿ 6 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

RELATED ARTICLES

Latest News