ತುಮಕೂರು, ಏ.24- ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ತುಮಕೂರು ಹಾಗೂ ತುಮಕೂರು ತಾಲ್ಲೂಕು ಪಂಚಾಯತ್ ವತಿಯಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳವಾದ ಮಂದಾರ ಗಿರಿಯ ಮೇಲೆ ಯುವ ಮತದಾರರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜೈನ ಬಸದಿ ಮುಂಭಾಗ ವಿ (ವೋಟ್) ಆಕೃತಿಯನ್ನು ರಚಿಸುವುದರ ಮೂಲಕ ಕಾರ್ಯಕ್ರಮವನ್ನು ಸುಂದರಗೊಳಿಸಲಾಯಿತು. ನಂತರ ಬೆಟ್ಟದ ಮೇಲೆ ವೋಟ್ ತುಮಕೂರು 2024 ಎಂಬ ಅಕ್ಷರಗಳಿರುವ ಬಲೂನ್ ಹಾರಿಸಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಜಿ., ಜಿಲ್ಲೆಯಲ್ಲಿ 45,000 ಯುವಕರು ಪ್ರಥಮ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಯುವ ಮತದಾರರನ್ನು ಮತಗಟ್ಟೆಗಳ ಕಡೆ ಸೆಳೆಯುವ ಉದ್ದೇಶದಿಂದ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರಣದಿಂದ ಮಂದಾರ ಗಿರಿ ಪ್ರವಾಸಿ ತಾಣದಲ್ಲಿ ಕಾರ್ಯಕ್ರಮ ಆಯೋಜಿಲಾಗಿದೆ ಎಂದರು.
ಮೊದಲ ಬಾರಿಗೆ ಮತ ಚಲಾಯಿಸಲು ಸಿದ್ದರಿರುವ ಯುವ ಮತದಾರರಿಗೆ ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತವನ್ನು ಕೋರಲಾಗಿದೆ. ಈ ಮೂಲಕ ಜಿಲ್ಲಿಯಲ್ಲಿರುವ ಎಲ್ಲಾ ಯುವ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದರ ಮೂಲಕ ಪ್ರಜಾ ಪ್ರಭುತ್ವವನ್ನು ಉಳಿಸಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು.
ಕಾರ್ಯಕ್ರದಮಲ್ಲಿ ಜಿಲ್ಲಾ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶ ಶಾರದಮ್ಮ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹರ್ಷಕುಮಾರ್ ಸೇರಿದಂತೆ ಸುಮಾರು 600 ಮಂದಿ ಭಾಗಿಯಾಗಿದ್ದರು. ವಿವಿಧ ಕಾಲೇಜು ವಿದ್ಯಾರ್ಥಿಗಳು, ಎನ್ಸಿಸಿ ಪಡೆ, ಪ್ರವಾಸಿಗರು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು ಭಾಗವಹಿಸಿದ್ದರು.