Friday, November 22, 2024
Homeಬೆಂಗಳೂರುಮತದಾನ ಜಾಗೃತಿಗಾಗಿ ವಿಶೇಷ ವಾಕಥಾನ್

ಮತದಾನ ಜಾಗೃತಿಗಾಗಿ ವಿಶೇಷ ವಾಕಥಾನ್

ಬೆಂಗಳೂರು, ಮಾ.17- ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಗಾಗಿ ಮತದಾನ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ ಮಹಿಳಾ ದಿನಾಚರಣೆ ವಿಶೇಷ ವಾಕಥಾನ್ನಲ್ಲಿ ಸಾವಿರಾರು ಹೆಣ್ಣುಮಕ್ಕಳು, ನಾಗರಿಕರು ಅತ್ಯುತ್ಸಾಹದಿಂದ ಭಾಗವಹಿಸಿದರು. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬಿಬಿಎಂಪಿ ಮತ್ತು ನಗರದ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಮಾರತಹಳ್ಳಿಯಲ್ಲಿರುವ ಕಾವೇರಿ ಆಸ್ಪತ್ರೆಯ ಆವರಣದಲ್ಲಿ ಇಂದು ಬೆಳಗ್ಗೆ ಖ್ಯಾತ ನಟಿ ಪ್ರಣಿತ ಸುಭಾಷ್ ಅವರು ವಾಕಥಾನ್, ಬೈಕ್ ರ್ಯಾಲಿ ಮತ್ತು ಬೈಸಿಕಲ್ ರ್ಯಾಲಿಗೆ ಚಾಲನೆ ನೀಡಿದರು.

ಸುಮಾರು 500 ಬೈಕುಗಳು 1200 ಸೈಕಲ್ಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು. ಮಾರತ್ಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ವಾಕಾಥಾನ್ ವೇಳೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ನಟಿ ಪ್ರಣೀತ ಸುಭಾಷ್, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಪ್ರಜಾಪ್ರಭುತ್ವದ ಅತಿದೊಡ್ಡ ಉತ್ಸವವಾಗಿರುವ ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವ ಮೂಲಕ ಭಾಗವಹಿಸಬೇಕು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮಹಿಳಾ ದಿನಾಚರಣೆ ಸಂದರ್ಭದಲ್ಲೇ ಈ ಮತದಾನ ಜಾಗೃತಿ ಕಾಯಕ್ರಮ ಆಯೋಜಿಸಿರುವುದು ಸೂರ್ತಿದಾಯಕ. ನಾಗರಿಕರು ತಮಗೆ ಏನು ಬೇಕು? ಏನು ಬೇಡ? ಎಂಬುದರ ಕುರಿತಾದ ದೇಶದ ಅಭಿವೃದ್ಧಿ ಕುರಿತಾದ ಪರಿಕಲ್ಪನೆಗಳು ಸಾಕಾರಗೊಳ್ಳಲು ಮತದಾನದ ಹಕ್ಕು ಚಲಾಯಿಸುವುದು ಅವಶ್ಯಕ ಎಂದು ಹೇಳಿದರು.

ದೇಶದ ಐಟಿ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ನಾಗರಿಕರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ತಮ್ಮ ಪರಿಚಿತರಿಗೆ, ಸ್ನೇಹಿತರಿಗೆ ಮತದಾನ ಮಾಡುವಂತೆ ತಿಳಿಸಬೇಕು. ಪ್ರಜಾಪ್ರಭುತ್ವದ ಯಶಸ್ಸು ನಾಗರಿಕರು ಮತ ಚಲಾವಣೆಯಿಂದ ನಿರ್ಧಾರವಾಗುತ್ತದೆ ಎಂದು ಬಿಬಿಎಂಪಿ ಚುನಾವಣೆಗಳ ವಿಶೇಷ ಆಯುಕ್ತ ಡಾ. ಆರ್.ಸೆಲ್ವಮಣಿ ಹೇಳಿದರು.ಚುನಾವಣಾ ಆಯೋಗದ ಮಾಧ್ಯಮ ಮುಖ್ಯಸ್ಥರಾದ ಜಡಿಯಪ್ಪ ಗೆದ್ಲಗಟ್ಟಿ, ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ವಿಜಯಭಾಸ್ಕರನ್, ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

Latest News