ಗುಂಟೂರು,ಮೇ 13- ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಚಾಲ್ತಿಯಲ್ಲಿರುವಂತೆಯೇ ಅತ್ತ ಆಂಧ್ರ ಪ್ರದೇಶದಲ್ಲಿ ಮತದಾರನೋರ್ವ ಸರತಿ ಸಾಲಲ್ಲಿ ನಿಲ್ಲದ ಶಾಸಕನಿಗೇ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮತದಾರ ಶಾಸಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ, ತೆನಾಲಿ ಶಾಸಕ ಮತ್ತು ವೈಸಿಪಿ ಅಭ್ಯರ್ಥಿ ಅನ್ನಬತುನಿ ಶಿವಕುಮಾರ್ ಇಂದು ಮತದಾನಕ್ಕೆ ಆಗಮಿಸಿದಾಗ ಇತರೆ ಮತದಾರರೊಂದಿಗೆ ಸರತಿ ಸಾಲಲ್ಲಿ ನಿಲ್ಲದೇ ನೇರವಾಗಿ ಮತಗಟ್ಟೆಯೊಳಗೇ ಪ್ರವೇಶ ಮಾಡಲು ಯತ್ನಿಸಿದ್ದಾರೆ. ಇದನ್ನು ಕಂಡ ಮತದಾರರೊಬ್ಬರು ಅದನ್ನು ಪ್ರಶ್ನಿಸಿದ್ದು, ಇದರಿಂದ ಆಕೋಶಗೊಂಡ ಶಾಸಕ ಶಿವಕುಮಾರ್ ನೋಡ ನೋಡುತ್ತಲೇ ಪ್ರಶ್ನಿಸಿದ ಮತದಾರನ ಕಪಾಳಕ್ಕೆ ಹೊಡೆದಿದ್ದಾರೆ.
ಈ ವೇಳೆ ಮತದಾರ ಕೂಡ ಶಾಸಕ ಶಿವಕುಮಾರ್‌ಗೆ ಕಪಾಳಮೋಕ್ಷ ಮಾಡಿದ್ದು, ಈ ವೇಳೆ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರು ಹಿಂದೆ ಮುಂದೆ ನೋಡದೆ ಮತದಾರನ ಮೇಲೆ ಮುಗಿಬಿದ್ದು ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮತದಾರನನ್ನು ಹೊರಗೆ ಎಳೆದೊಯ್ದಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ನಿಯಂತ್ರಿಸಿದ್ದಾರೆ.ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಶಾಸಕನ ನಡೆಗೆ ವ್ಯಾಪಕ ಆಕೋಶ ವ್ಯಕ್ತವಾಗುತ್ತಿದೆ.