ಬೆಂಗಳೂರು,ಏ.20- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಳ ಮೀಸಲಾತಿಯ ಗೊಂದಲವನ್ನು ಬಗೆಹರಿಸಲು ಇದೇ 24 ರಂದು ವಿಶೇಷ ಸಚಿವ ಸಂಪುಟಸಭೆ ನಿಗದಿ ಮಾಡಿದೆ.
ಒಳ ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವೆ ಅಸಮಾಧಾನಗಳಿವೆ. ಪರಿಶಿಷ್ಟ ಜಾತಿಯ ಇತರೆ ಅಲೆಮಾರಿ ಸಮುದಾಯಗಳೂ ಕೂಡ ರಾಜ್ಯ ಸರ್ಕಾರದ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಅಸಮಾಧಾನ ಇದೆ. ಈ ವಿಷಯವಾಗಿ ಸಾಕಷ್ಟು ಪ್ರತಿಭಟನೆಗಳಾಗಿವೆ. ಎಡಗೈ ಸಮುದಾಯ ಒಳ ಮೀಸಲಾತಿ ಯಥಾವತ್ತು ಜಾರಿಯಾಗಬೇಕೆಂದು ಪಟ್ಟು ಹಿಡಿದಿದ್ದರೆ, ಬಲಗೈ ಸೇರಿದಂತೆ ಇತರ ಸಮುದಾಯಗಳು ನಿವೃತ್ತ ನ್ಯಾಯಮುರ್ತಿ ನಾಗಮೋಹನ್ ದಾಸ್ ಅವರ ವರದಿ ತಿರಸ್ಕರಿಸುವಂತೆ ಒತ್ತಾಯಿಸುತ್ತಿವೆ.
ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ, ಒಳಮೀಸಲಾತಿ ಜಾರಿಗೊಳಿಸುವುದಾಗಿ ಪ್ರಕಟಿಸಿತ್ತು. ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಆದೇಶವು ದೊರೆತ್ತಿದ್ದರಿಂದಾಗಿ ಒಳಮೀಸಲಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು.
ಸಚಿವ ಸಂಪುಟದಲ್ಲಿ ಹಲವು ಸುತ್ತಿನ ಚರ್ಚೆಗಳ ಬಳಿಕ ಒಳಮೀಸಲಾತಿ ಜಾರಿಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಅದರಲ್ಲಿ ನಿಗದಿ ಪಡಿಸಿದ್ದ ರೋಸ್ಟರ್ ಬಿಂದುಗಳು ಗೊಂದಲಕಾರಿಯಾಗಿದ್ದವು. ಇದರಿಂದಾಗಿ ಪರಿಶಿಷ್ಟ ಜಾತಿಯ ಕೆಲ ಸಮುದಾಯಗಳು ಬೀದಿಗಿಳಿದಿದ್ದವು.
ಒಳಮೀಸಲಾತಿ ಇತ್ಯರ್ಥವಾಗದೇ ಇದ್ದಿದ್ದರಿಂದ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕಳೆದ 3 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ. ಯುವ ಸಮುದಾಯ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದೆ.
ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡದೇ ಇದ್ದರೆ, ಯುವ ಸಮುದಾಯದ ಆಕ್ರೋಶ ಮತ್ತಷ್ಟು ತೀವ್ರಗೊಳ್ಳುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಗೊಂದಲಗಳನ್ನು ಇತ್ಯರ್ಥಪಡಿಸಲು ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಪ್ರಯತ್ನಗಳನ್ನು ಆರಂಭಿಸಿವೆ.
ರೋಸ್ಟರ್ ಬಿಂದುವಿನ ಗೊಂದಲಗಳನ್ನು ಸರಿಪಡಿಸಲು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ.
ಸಮಿತಿ ಒಂದು ವಾರದೊಳಗಾಗಿ ವರದಿ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
