ಬೆಳಗಾವಿ,ಮೇ17- ಶಿವಂ ಅಸೋಸಿಯೇಟ್ಸ್ ನ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಸಿಐಡಿ ಘಟಕದ ಡಿಐಜಿ ಡಾ.ಭೀಮಾಶಂಕರ್ ಗುಳೇದ್ ಅವರ ನೇತೃತ್ವದ ತಂಡ ನಗರ ಪೊಲೀಸ್ ಆಯುಕ್ತ ಡಾ.ಭೂಷಣ್ ಬೊರಸೆ ಅವರನ್ನು ಭೇಟಿ ಮಾಡಿ, ಚರ್ಚಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ಹಗರಣದ ಗಂಭೀರತೆ ಹಾಗೂ ಅಂತಾರಾಜ್ಯ ವ್ಯಾಪ್ತಿಯನ್ನು ಪರಿಗಣಿಸಿ ಜಿಲ್ಲಾಡಳಿತ ನೀಡಿದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಸಿಐಡಿ ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರಿಂದ ಪ್ರಕರಣದ ಕಡತಗಳನ್ನು ಪಡೆದುಕೊಂಡು ತನಿಖೆಯನ್ನು ಚುರುಕುಗೊಳಿಸಿದೆ.
ಆರ್‌ಬಿಐ ಮಾರ್ಗಸೂಚಿ ಉಲ್ಲಂಘಿಸಿ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸುಮಾರು 35 ಸಾವಿರ ಜನರಿಂದ ಕೋಟ್ಯಂತರ ರೂ. ಠೇವಣಿಯನ್ನು ಸಂಗ್ರಹಿಸಿ ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಕ್ರಮ ವ್ಯವಹಾರದ ದೂರಿನನ್ವಯ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
