ಬೆಂಗಳೂರು,ಏ.20- ವಿದ್ಯುತ್ ದರ ಪರಿಷ್ಕರಣೆಯಿಂದಾಗಿ ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕರ್ನಾಟಕದ ಗೃಹಬಳಕೆಯ ವಿದ್ಯುತ್ ದರ ಅಧಿಕವಾಗಿದೆ.ದಕ್ಷಿಣ ಭಾರತದ 5 ರಾಜ್ಯಗಳ ನಡುವೆ ಗೃಹಬಳಕೆಯ ವಿದ್ಯುತ್ ದರಗಳನ್ನು ಹೋಲಿಕೆ ಮಾಡಿದರೆ ಕರ್ನಾಟಕಕ್ಕಿಂತ ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿದ್ಯುತ್ ದರ ಕಡಿಮೆ ಇದ್ದರೆ ಕೇರಳ ರಾಜ್ಯದ ವಿದ್ಯುತ್ ದರ ಹೆಚ್ಚಳವಿದೆ.
ಕರ್ನಾಟಕ, ತೆಲಂಗಾಣ ರಾಜ್ಯಗಳು 200 ಯೂನಿಟ್‌ವರೆಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಒದಗಿಸುವುದರಿಂದ ಸಾಮಾನ್ಯ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗುವುದಿಲ್ಲ. ಅದೇ ರೀತಿ ತಮಿಳುನಾಡುವಿನಲ್ಲಿ 100 ಯೂನಿಟ್‌ವರೆಗೂ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ.
ಆದರೆ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಕಡಿಮೆ ಬಳಕೆಯ ಗ್ರಾಹಕರಿಗೆ ಅತೀ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಪೂರೈಸುತ್ತಿವೆ. ಕರ್ನಾಟಕದಲ್ಲೂ 10 ಹೆಚ್‌ಪಿವರೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ಮತ್ತು 200 ಯೂನಿಟ್‌ವರೆಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕೆಲವು ವಲಯದ ಗ್ರಾಹಕರಿಗೆ ರಿಯಾಯಿತಿಯನ್ನು ನೀಡುತ್ತಿದೆ.
ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಎರಡು ಕಂಪನಿಗಳ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಅನುಮೋದನೆ ನೀಡಿದ್ದು, ಮೂರು ಕಂಪನಿಗಳು ತಮ ಗ್ರಾಹಕರಿಗೆ ಈಗಾಗಲೇ ಸಂಗ್ರಹಿಸಿರುವ ವಿದ್ಯುತ್
ಬಿಲ್ಲಿನ ಭಾಗಶಃ ಹಣವನ್ನು ಮರುಪಾವತಿಸಲು ಆದೇಶ ನೀಡಿದೆ.
ಬೆಸ್ಕಾಂಗೆ 56 ಪೈಸೆ ಮತ್ತು ಚೆಸ್ಕಾಂಗೆ 15 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿದೆ. ಆದರೆ, ಮೆಸ್ಕಾಂನಿಂದ 9 ಪೈಸೆ, ಹೆಸ್ಕಾಂ ಮತ್ತು ಜಿಸ್ಕಾಂನಿಂದ ತಲಾ 10 ಪೈಸೆ ಗ್ರಾಹಕರಿಗೆ ಮರು ಪಾವತಿ ಮಾಡಲು ಕೆಇಆರ್‌ಸಿ ದರ ಪರಿಷ್ಕರಣೆ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಖಾಸಗಿ ವಿದ್ಯುತ್ ಕಂಪನಿಗಳಿಗೂ ಗ್ರಾಹಕರಿಗೆ ಮರು ಪಾವತಿ ಮಾಡಲು ಸೂಚಿಸಿದೆ.
ಲಭ್ಯವಿರುವ ಮಾಹಿತಿ ಪ್ರಕಾರ 2025-26ನೇ ಸಾಲಿನಲ್ಲಿ ಕೈಗಾರಿಕೆಗಳಿಗೆ 6.60 ರೂ., ವಾಣಿಜ್ಯ ಬಳಕೆಗೆ 5.95 ರೂ. ಪ್ರತೀ ಯೂನಿಟ್‌ಗೆ ವಿಧಿಸಲಾಗುತ್ತಿತ್ತು. ಗೃಹಬಳಕೆಗೆ 5.90 ರೂ. ಪ್ರತಿ ಯೂನಿಟ್‌ಗೆ ವಿಧಿಸಲಾಗುತ್ತಿತ್ತು. ಏಪ್ರಿಲ್‌ನಿಂದ ಪ್ರತಿ ಯೂನಿಟ್‌ಗೆ 56 ಪೈ. ಬೆಸ್ಕಾಂ ವ್ಯಾಪ್ತಿಯಲ್ಲಿ ಹಾಗೂ 15 ಪೈ. ಚೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚಳ ಮಾಡಲಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹಬಳಕೆಗೆ ಪ್ರತೀ ಯೂನಿಟ್‌ಗೆ 6.46 ರೂ. ವಿದ್ಯುತ್ ದರ ವಿಧಿಸಲಾಗುತ್ತಿದೆ. ಉಳಿದ ವಿದ್ಯುತ್ ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ.
ಕೇರಳ :
ಕೇರಳ ರಾಜ್ಯದಲ್ಲಿ 5 ಹಂತದಲ್ಲಿ ವಿದ್ಯುತ್ ದರಗಳನ್ನು ನಿಗದಿಪಡಿಸಲಾಗಿದೆ. 3.35 ರಿಂದ 8.50 ರೂ.ವರೆಗೂ ವಿದ್ಯುತ್ ದರವನ್ನು ವಿಧಿಸಲಾಗುತ್ತಿದೆ.
50 ಯೂನಿಟ್‌ವರೆಗೆ ಪ್ರತೀ ಯೂನಿಟ್‌ಗೆ 3.55 ರೂ., 51 ರಿಂದ 100 ಯೂನಿಟ್‌ಗೆ 4.25 ರೂ., 100 ರಿಂದ 150 ಯೂನಿಟ್‌ಗೆ 5.35 ರೂ., 150 ರಿಂದ 200 ಯೂನಿಟ್‌ಗೆ 7.20 ರೂ. ಹಾಗೂ 201 ರಿಂದ 250 ಯೂನಿಟ್‌ವರೆಗೂ ಪ್ರತೀ ಯೂನಿಟ್‌ಗೆ 8.50 ರೂ. ವಿಧಿಸಲಾಗುತ್ತಿದೆ.
ತಮಿಳುನಾಡು :
ನೆರೆಯ ತಮಿಳುನಾಡಿನಲ್ಲಿ ಗೃಹಬಳಕೆಗೆ 2.35 ರೂ.ಗಳಿಂದ 10.50 ರೂ.ಗಳವರೆಗೆ ಪ್ರತೀ ಯೂನಿಟ್‌ಗೆ ವಿಧಿಸಲಾಗುತ್ತಿದೆ. 100 ಯೂನಿಟ್‌ಗಳವರೆಗೂ ಉಚಿತ ವಿದ್ಯುತ್ ಪೂರೈಕೆ ಇದೆ. ಆರು ಹಂತದಲ್ಲಿ ವಿದ್ಯುತ್ ದರ ನಿಗದಿಪಡಿಸಲಾಗಿದೆ. 101 ರಿಂದ 200 ಯೂನಿಟ್‌ವರೆಗೆ 2.35 ರೂ.ಗಳಿಂದ 4.80 ರೂ. ಹಾಗೂ 201 ರಿಂದ 400 ಯೂನಿಟ್‌ವರೆಗೆ 4.70 ರೂ. ಪ್ರತಿ ಯೂನಿಟ್‌ಗೆ ವಿಧಿಸಲಾಗುತ್ತಿದೆ.
401 ರಿಂದ 500 ಯೂನಿಟ್‌ವರೆಗೆ 6.30 ರೂ.ನಿಂದ 6.65 ರೂ. ವಿಧಿಸಲಾಗುತ್ತಿತ್ತು. 801 ರಿಂದ 1000 ಯೂನಿಟ್‌ಗೆ 10.50 ರೂ. ಪ್ರತೀ ಯೂನಿಟ್‌ಗೆ ವಿಧಿಸಲಾಗುತ್ತಿದೆ.
ತೆಲಂಗಾಣ:
ತೆಲಂಗಾಣ ರಾಜ್ಯದಲ್ಲೂ ಕರ್ನಾಟಕದಂತೆ 200 ಯೂನಿಟ್‌ವರೆಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ರಾಜ್ಯದಲ್ಲೂ 5 ಹಂತಗಳಿದ್ದು, 200 ಯೂನಿಟ್‌ವರೆಗೆ ಪ್ರತೀ ಯೂನಿಟ್‌ಗೆ 5.10 ರೂ. ಇದೆ. 201 ರಿಂದ 300 ಯೂನಿಟ್‌ವರೆಗೆ 7.70 ರೂ. ಪ್ರತೀ ಯೂನಿಟ್‌ಗೆ ವಿಧಿಸಲಾಗಿದೆ.
301 ರಿಂದ 400 ಯೂನಿಟ್‌ವರೆಗೆ ಪ್ರತೀ ಯೂನಿಟ್‌ಗೆ 9 ರೂ., 800 ಯೂನಿಟ್‌ಗಿಂತ ಮೇಲ್ಪಟ್ಟ ವಿದ್ಯುತ್ ಬಳಕೆಗೆ 10 ರೂ. ವಿಧಿಸಲಾಗುತ್ತಿದೆ.
ಆಂಧ್ರಪ್ರದೇಶ :
ಆಂಧ್ರಪ್ರದೇಶದಲ್ಲಿ 6 ಹಂತದ ವಿದ್ಯುತ್ ದರಗಳನ್ನು ನಿಗದಿಪಡಿಸಲಾಗಿದ್ದು, ಪ್ರತೀ ಯೂನಿಟ್‌ಗೆ 2.19 ರೂ.ಗಳಿಂದ 9.75 ರೂ.ಗಳವರೆಗೆ ವಿಧಿಸಲಾಗುತ್ತಿದೆ. 30 ಯೂನಿಟ್‌ವರೆಗೆ ಪ್ರತೀ ಯೂನಿಟ್‌ಗೆ 2.19 ರೂ., 31 ರಿಂದ 75 ಯೂನಿಟ್‌ವರೆಗೆ 3.27 ರೂ., 76 ರಿಂದ 125 ಯೂನಿಟ್‌ವರೆಗೆ 4.58 ರೂ., 126 ರಿಂದ 225 ಯೂನಿಟ್‌ವರೆಗೆ 6 ರೂ., 226 ರಿಂದ 400 ಯೂನಿಟ್‌ವರಗೆ 8.75 ರೂ. ಹಾಗೂ 400 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತೀ ಯೂನಿಟ್‌ಗೆ
9.75 ರೂ. ವಿಧಿಸಲಾಗುತ್ತಿದೆ.
