Homeರಾಜ್ಯಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆ, 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆ, 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Heavy rains for the next four days, yellow alert for 22 districts

ಬೆಂಗಳೂರು,ಮೇ 18- ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ, ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ.

ಭಾರತೀಯ ಹವಾಮಾನ ಇಲಾಖೆ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಹಾಗೂ ಕರಾವಳಿ ಭಾಗಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.
ಮುಖ್ಯವಾಗಿ ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಗುಡುಗು-ಮಿಂಚಿನೊಂದಿಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ. ಇದೇ ಕಾರಣಕ್ಕೆ ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

ಇದರ ಜೊತೆಗೆ ದಕ್ಷಿಣ ಒಳನಾಡಿನ ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಭಾರೀ ಮಳೆಯೊಂದಿಗೆ ಆಲಿಕಲ್ಲು ಮಳೆಯ ಸಂಭವ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಜಿಲ್ಲೆಗಳಲ್ಲೂ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ಇಲಾಖೆ ಮನವಿ ಮಾಡಿದೆ. ರೈತರು, ಜಾನುವಾರು ಸಾಕಾಣಿಕಾದಾರರು ಬೆಳೆ ಮತ್ತು ಪಶುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಹ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮಧ್ಯ ಕರುನಾಡಿನಲ್ಲಿ ವರುಣನ ಆರ್ಭಟ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಶಿವಮೊಗ್ಗ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರೈಲು ಸಂಚಾರ ಅಡ್ಡಿಯಾಗಿದ್ದು, ಸುಮಾರು ಎರಡು ಗಂಟೆಗಳಿಂದ ರೈಲುಗಳು ನಿಂತಲ್ಲೇ ನಿಂತಿವೆ. ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಜೋರಾದ ಬಿರುಗಾಳಿ ಮಳೆಯಿಂದಾಗಿ ರೈಲ್ವೇ ಟ್ರ್ಯಾಕ್‌ನ ವಿದ್ಯುತ್‌ ಲೈನ್‌ ಮೇಲೆ ಮರ ಮುರಿದು ಬಿದ್ದ ಹಿನ್ನೆಲೆ ಎರಡು ರೈಲುಗಳು ನಿಂತಲ್ಲೇ ನಿಂತಿವೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಶಿವಮೊಗ್ಗ ಬರುವ ಜನಶತಾಬ್ಧಿ ರೈಲು ಹಾಗೂ ಇಂಟರ್‌ ಸಿಟಿ ರೈಲುಗಳಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ ಎರಡು ಗಂಟೆಗಳಿಂದ ಎರಡು ರೈಲುಗಳು ನಿಂತಲ್ಲೇ ನಿಂತಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ. ರೈಲು ಸಂಚಾರಕ್ಕೆ ಅಡ್ಡಿ ಹಿನ್ನೆಲೆ ಪ್ರಯಾಣಿಕರು ಲಗೇಜ್‌ ಹೊತ್ತುಕೊಂಡು ಬಸ್‌‍ನಲ್ಲಿ ತೆರಳಲು ಮುಂದಾದರು.

ಸಿಡಿಲು ಬಡಿದು ಇಬ್ಬರು ಸಾವು :
ಬೇಸಿಗೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಾವು-ನೋವು ಕೂಡ ಸಂಭವಿಸಿದೆ. ಗೊಬ್ಬರ ತುಂಬುತ್ತಿದ್ದ ವೇಳೆ ಸಿಡಿಲಿನ ಅಬ್ಬರಕ್ಕೆ ರೈತ ಬಲಿಯಾಗಿದ್ದಾನೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಏಕಾಏಕಿ ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ್ದಾನೆ. ಲಿಂಗಸಗೂರು ತಾಲೂಕಿನ ಕೊಮಲಾಪುರ ಗ್ರಾಮದ ಕರಿಯಪ್ಪ ಅಯ್ಯಪ್ಪ ಗಣಿಕಿಹಾಳ (40) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಜಯಶ್ರೀ ಶಿರಸಂಗಿ (36) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಸಿಡಿಲು ಬಡಿದ ಪರಿಣಾಮ ಮೃತ ಮಹಿಳೆಯ ಪತಿ ಹನುಮಂತಪ್ಪ ಶಿರಸಂಗಿಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆನೀಡಲಾಗುತ್ತಿದೆ.

ಮದುವೆ ಮಂಟಪದಲ್ಲಿ ವರುಣನ ರೌದ್ರಾವತಾರ :
ಮಳೆಯಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಬಿರುಗಾಳಿ ಮಳೆಗೆ ಮದುವೆ ನಡೆಯುತ್ತಿರುವಾಗಲೇ ಮಂಟಪದ ಮೇಲ್ಛಾವಣಿ ಬಿದ್ದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾ. ಕೆಂಭಾವಿ ಪಟ್ಟಣದಲ್ಲಿ ನಡೆದಿದೆ. ಶಾದಿ ಮಹಲ್‌ನಲ್ಲಿ ನಡೆಯುತ್ತಿದ್ದ ಮದುವೆಗೆ ವರುಣನ ಅಬ್ಬರ ತಟ್ಟಿದ್ದು, ಮದುವೆ ಮನೆಯಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ಇನ್ನು ರಾಯಚೂರು, ಯಾದಗಿರಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.

ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ಕರಾವಳಿ ತೀರದಲ್ಲಿ ಸಮುದ್ರ ಅಲೆಗಳ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಮೇ 19ರವರೆಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಲವೊಮ್ಮೆ ಗಾಳಿಯ ವೇಗ 60 ಕಿಲೋಮೀಟರ್‌ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ :
ರಾಜ್ಯದಲ್ಲಿ ವರುಣನ ಅಬ್ಬರ ಜೋರಾದ ಬೆನ್ನಲ್ಲೇ ಹವಾಮಾನ ಇಲಾಖೆ ರಾಜ್ಯದ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ 22 ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಗುಡುಗು ಸಹಿತ 40 ಕಿ.ಮೀ ವೇಗದಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ : ಸಂಚಾರ ಅಸ್ತವ್ಯಸ್ತ
ಬೆಂಗಳೂರು ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯದಲ್ಲೇ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆ ಉಂಟಾಯಿತು.

ಮಳೆಯ ಅಬ್ಬರಕ್ಕೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ವಿಶೇಷವಾಗಿ ಐಟಿ ಕಾರಿಡಾರ್‌, ಮುಖ್ಯ ವಾಣಿಜ್ಯ ಪ್ರದೇಶಗಳು ಹಾಗೂ ಒಳರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗೊಂಡು ಜನರು ಪರದಾಡುವಂತಾಯಿತು.

ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಆತಂಕಕ್ಕೊಳಗಾದರು. ಕೆಲವು ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಂಜೆ ವೇಳೆಯಲ್ಲೇ ಭಾರೀ ಮಳೆ ಸುರಿದ ಕಾರಣ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಜನರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಬಸ್‌ಗಳು ಹಾಗೂ ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ವಿಳಂಬವಾಗಿ ಸಂಚರಿಸಿತು.

ಮಳೆಯಿಂದ ಬೈಕ್ ಸವಾರರು ಮತ್ತು ಕಾರು ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆ ವಾಹನಗಳು ನಿಧಾನವಾಗಿ ಚಲಿಸಬೇಕಾದ ಪರಿಸ್ಥಿತಿ ಎದುರಾಯಿತು. ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ರಸ್ತೆಗೆ ಬಿದ್ದಿರುವ ವರದಿಯೂ ಲಭ್ಯವಾಗಿದೆ

RELATED ARTICLES

Latest News