ಮಳವಳ್ಳಿ,ಜು.25- ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರೊಬ್ಬರ ಮೇಲೆ ದೊಣ್ಣೆಯಿಂದ ಹೊಡೆದು ಅವರನ್ನು ಕೊಲೆ ಮಾಡಿರುವ ಘಟನೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಶಾಸಕ ನರೇಂದ್ರಸ್ವಾಮಿ ಅವರ ಆಪ್ತರಾಗಿದ್ದ ಕಾಂಗ್ರೆಸ್ ಮುಖಂಡರಾದ ಶಿವರುದ್ರ (52) ಕೊಲೆಯಾದವರು.
ಗುಳಘಟ್ಟ ಗ್ರಾಮದ ನಿವಾಸಿ ಶಿವರುದ್ರ ಅವರು ಜಮೀನ್ದಾರರಾಗಿದ್ದು, ನಿನ್ನೆ ಸಂಜೆ ತಮ ಸ್ಕೂಟಿಯಲ್ಲಿ ಗ್ರಾಮದ ಹೊರ ಭಾಗದಲ್ಲಿರುವ ಅವರ ಜಮೀನಿನ ಬಳಿ ಹೋದಾಗ ಯಾವುದೋ ವಿಚಾರಕ್ಕೆ ಪಕ್ಕದ ಜಮೀನಿನವರ ಜೊತೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ. ಆ ಸಂದರ್ಭದಲ್ಲಿ ಶಿವರುದ್ರ ಅವರಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾತ್ರಿಯಾದರೂ ಶಿವರುದ್ರ ಅವರು ಮನೆಗೆ ವಾಪಸ್ ಆಗದಿದ್ದಾಗ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೂ ಅವರು ಪತ್ತೆಯಾಗಿರಲಿಲ್ಲ.
ಜಮೀನಿನ ಬಳಿ ಹೋಗಿ ನೋಡಿದಾಗ ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಜಮೀನಿನ ಕಾಲುವೆಯಲ್ಲಿ ಶಿವರುದ್ರ ಅವರ ಶವ ಹಾಗೂ ಅದರ ಪಕ್ಕದಲ್ಲೇ ಸ್ಕೂಟಿ ಪತ್ತೆಯಾಗಿದೆ. ಸುದ್ದಿ ತಿಳಿದು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಶಿವರುದ್ರ ಅವರು ಮಳವಳ್ಳಿ ಶಾಸಕರಾದ ನರೇಂದ್ರಸ್ವಾಮಿಯವರ ಆಪ್ತರು.ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.ಆಗಾಗ್ಗೆ ಪಕ್ಕದ ಜಮೀನಿನವರ ಜೊತೆ ಟ್ರಾನ್ಸ್ ಫಾರ್ಮರ್‌ನಿಂದ ವಿದ್ಯುತ್ ತೆಗೆದುಕೊಳ್ಳುವ ವಿಚಾರಕ್ಕೆ ಜಗಳವಾಗುತ್ತಿತ್ತು. ನಿನ್ನೆ ಸಂಜೆ ಜಮೀನಿನ ಬಳಿ ಹೋದಾಗ ಇದೇ ವಿಚಾರಕ್ಕೆ ಶಿವರುದ್ರ ಹಾಗೂ ಪಕ್ಕದ ಜಮೀನಿನ ಮಾಲೀಕರ ಜೊತೆ ಜಗಳ ನಡೆದು ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
