ನವದೆಹಲಿ, ಮೇ 27- ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪದಶ್ರೀ ಪುರಸ್ಕೃತರಾದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪುಸ್ತಕ ಮನೆ ರುವಾರಿ ಎಂ. ಅಂಕೇಗೌಡರನ್ನು ತಮ ನಿವಾಸಕ್ಕೆ ಬರಮಾಡಿಕೊಂಡು ಗೌರವಿಸಿದರು.
ರಾಷ್ಟ್ರಪತಿ ಭವನದಲ್ಲಿ ಅಂಕೇಗೌಡ ಅವರು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ಪದಶ್ರೀ ಪುರಸ್ಕಾರ ಸ್ವೀಕರಿಸುವ ಕ್ಷಣಕ್ಕೆ ಸಾಕ್ಷಿಯಾಗಿದ್ದ ಸಚಿವ ಕುಮಾರಸ್ವಾಮಿ ಅವರು, ಅಂಕೇಗೌಡರನ್ನು ತಮ ನಿವಾಸಕ್ಕೆ ಬರಮಾಡಿಕೊಂಡು ಸತ್ಕರಿಸಿದರು.
ಪುಸ್ತಕ ಮನೆ ಅಭಿವೃದ್ಧಿ ಬಗ್ಗೆ ಆಗಬೇಕಿರುವ ಕೆಲಸಗಳ ಬಗ್ಗೆ ಅಂಕೇಗೌಡರಿಂದ ಮಾಹಿತಿ ಪಡೆದುಕೊಂಡರು. ಗೌಡರ ಸಾಧನೆ ಬಗ್ಗೆ ಮತ್ತು ಅವರ ಪುಸ್ತಕ ಪ್ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಕೇಗೌಡರ ಪುಸ್ತಕ ಪ್ರೇಮ ಅನನ್ಯ. ಮುಂದಿನ ತಲೆಮಾರಿಗೂ ಓದಿನ ಪರಂಪರೆಯನ್ನು ಮುಂದುವರಿಸುವ ಅವರ ಅಚಲತೆ, ಕಾಳಜಿ ನಮಗೆಲ್ಲರಿಗೂ ಪ್ರೇರಣದಾಯಕ ಎಂದು ತಮ ಹೇಳಿಕೆಯಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಮಾತ್ರವಲ್ಲ ಜಗತ್ತಿನ ಅನೇಕ ಭಾಷೆಗಳ ಅನೇಕಾನೇಕ ಶ್ರೇಷ್ಠ ಕೃತಿಗಳು ಇವರ ಸಂಗ್ರಹದಲ್ಲಿವೆ. ಕನ್ನಡನಾಡಿನ ಹೆಮೆ ಆಗಿರುವ ಶ್ರೀಯುತರಿಗೆ ಅವರ ಪುಸ್ತಕ ಮನೆಯನ್ನು ಉಳಿಸಿ ಮತ್ತು ಬೃಹತ್ ಆಗಿ ಬೆಳೆಸುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರಲ್ಲಿ, ಅದರಲ್ಲಿಯೂ ಬಹುಮುಖ್ಯವಾಗಿ ಯುವಜನರಲ್ಲಿ ಓದುವ ಹವ್ಯಾಸ ಬೆಳೆಸಲು ತಮ ಬದುಕನ್ನೇ ಮೀಸಲಿಟ್ಟಿರುವ ಅಂಕೇಗೌಡರು ಕನ್ನಡನಾಡು ಹೆಮೆಪಡುವಂತಹ ಕಾಯಕ ಮಾಡುತ್ತಿದ್ದಾರೆ. ಪುಸ್ತಕ ಮನೆ ಸ್ಥಾಪಿಸಿ ಕಳೆದ ಐದು ದಶಕಗಳಲ್ಲಿ ಸುಮಾರು 29 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ಪುಸ್ತಕ ಮತ್ತು ಓದುವ ಪರಂಪರೆಗೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
