Homeರಾಜ್ಯಸಾವಯವ ಕೃಷಿ ಪದ್ಧತಿಯಿಂದ ಮಣ್ಣು ಮತ್ತು ಮನುಷ್ಯರ ಆರೋಗ್ಯಕ್ಕೆ ನಾಂದಿ : ಡಾ.ಸಿ.ಎನ್‌. ಮಂಜುನಾಥ್‌

ಸಾವಯವ ಕೃಷಿ ಪದ್ಧತಿಯಿಂದ ಮಣ್ಣು ಮತ್ತು ಮನುಷ್ಯರ ಆರೋಗ್ಯಕ್ಕೆ ನಾಂದಿ : ಡಾ.ಸಿ.ಎನ್‌. ಮಂಜುನಾಥ್‌

Organic farming system is a start for soil and human health: Dr. C.N. Manjunath

ಬೆಂಗಳೂರು, ಮೇ 27-ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುವುದರಿಂದ ಮಣ್ಣು ಮತ್ತು ಮನುಷ್ಯರ ಆರೋಗ್ಯಕ್ಕೆ ನಾಂದಿಯಾಗಲಿದೆ ಎಂದು ಪದಶ್ರೀ ಪ್ರಶಸ್ತಿ ಪುರಸ್ಕೃತರಾದ ಸಂಸದ ಡಾ.ಸಿ. ಎನ್‌. ಮಂಜುನಾಥ್‌ ತಿಳಿಸಿದರು.

ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಕನಕಪುರ ಆರ್ಗ್ಯಾನಿಕ್‌ ಪ್ರೊಡ್ಯೂಸರ್‌ ಕಂಪನಿ ಲಿಮಿಟೆಡ್‌ ಹಾಗೂ ಕೋಡಿಹಳ್ಳಿ ರೇಷೆ ಕೃಷಿ ರೈತರ ಉತ್ಪಾದಕ ಕಂಪನಿ ಲಿಮಿಟೆಡ್‌ ಸಂಯುಕ್ತ ಆಶ್ರಯದಲ್ಲಿ ಗೊಬ್ಬರಗಳ ಸಮತೋಲಿತ ಬಳಕೆ ಮತ್ತು ಸಮಗ್ರ ಮಣ್ಣಿನ ಆರೋಗ್ಯ ನಿರ್ವಹಣೆ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮತ್ತು ಸಂವೇದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ ದೇಶದ ಆರೋಗ್ಯ ಸುಸ್ಥಿರವಾಗಿರಬೇಕಾದರೆ ಗ್ರಾಮೀಣ ಆರ್ಥಿಕತೆ ಬಲವಾಗಬೇಕು. ಗ್ರಾಮೀಣ ಆರ್ಥಿಕತೆ ಬಲವಾಗಬೇಕಾದರೆ ಜಾನುವಾರುಗಳ ಸಂಖ್ಯೆ ಹೆಚ್ಚಾಗಬೇಕು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ಕ್ಯಾನ್ಸರ್‌ಗಳಂತಹ ಗಂಭೀರ ರೋಗಗಳು ಹೆಚ್ಚುತ್ತಿವೆ. ಗೊಬ್ಬರ ಮತ್ತು ಔಷಧಿಗಳನ್ನು ಮಿತವಾಗಿ ಬಳಸುವುದು ಅತ್ಯಗತ್ಯ ಎಂದು ಅವರು ಹೇಳಿದರು.

ರೈತರ ನಿಜವಾದ ಪುಸ್ತಕವೆಂದರೆ ಅವರ ಜಮೀನು. ನಿಜವಾದ ಗ್ರಂಥಾಲಯವೆಂದರೆ ಕೃಷಿ ಭೂಮಿ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಯೂಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ಸರ್ಕಾರದ ಯೋಜನೆಗಳು, ಜೈವಿಕ ಕೃಷಿ ವಿಧಾನಗಳು ಮತ್ತು ಮಣ್ಣಿನ ಆರೋಗ್ಯದ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಭೂಮಿಗೂ ಜೀವವಿದೆ. ಪ್ರತಿಯೊಂದು ಜೀವರಾಶಿಯೂ ಒಂದರ ಮೇಲೆ ಒಂದು ಅವಲಂಬಿತವಾಗಿದೆ. ಮಣ್ಣಿನ ಆರೋಗ್ಯ ಕಾಪಾಡಿದಾಗ ಮಾತ್ರ ಉತ್ತಮ ಆಹಾರ ಉತ್ಪಾದನೆ ಸಾಧ್ಯ. ರೈತರಿಗೆ ಮಣ್ಣಿನ ಆರೋಗ್ಯದ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ದೇಶಾದ್ಯಂತ ಹೆಚ್ಚಾಗಿ ನಡೆಯಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಾ.ಡಿ.ಕಲೈವನನ್‌, ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ), ಡಾ. ಜಿ.ಆರ್‌. ಸಿತಾ, ಕನಕಪುರ ಆರ್ಗಾನಿಕ್‌ ಪ್ರೊಡ್ಯೂಸರ್‌ ಕಂಪನಿಯ ನಿರ್ದೇಶಕ ಲಕ್ಷ್ಮೀ ನಾರಾಯಣ ಹಾಗೂ ಕೋಡಿಹಳ್ಳಿ ರೇಷ್ಮೆ ಕೃಷಿ ರೈತರ ಉತ್ಪಾದಕ ಕಂಪನಿ ಲಿಮಿಟೆಡ್‌ನ ನಿರ್ದೇಶಕ ಸಂಪತ್‌ ಕುಮಾರ್‌, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್‌ಗೌಡ, ಕನಕಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಕೆ.ಪಿ. ಕುಮಾರ್‌, ಕನಕಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಚೂಡಾಮಣಿ ಚಂದ್ರು ಹಲವು ಗಣ್ಯರು ಹಾಗೂ ಕನಕಪುರ ತಾಲ್ಲೂಕಿನ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News