ದುಬೈ, ಜು.12-ಹೋರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಅಮೆರಿಕ ಇಂದು ಮುಂಜಾನೆ ಇರಾನ್‌ನ ಹಲವು ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.ಇದಕ್ಕೆ ಪ್ರತಿಯಾಗಿ ಇರಾನ್ ಬಹ್ರೇನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇರಾನ್‌ನ ಸುಮಾರು 140 ಗುರಿಗಳ ಮೇಲೆ ನಡೆಸಲಾಗಿದ್ದ ಇತ್ತೀಚಿನ ವಾಯುದಾಳಿ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್‌ನೀಡಿದ ಮಾಹಿತಿಯ ಪ್ರಕಾರ, ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಉಡಾವಣಾ ಕೇಂದ್ರಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರಗಳು, ಸಂವಹನ ವ್ಯವಸ್ಥೆಗಳು ಮತ್ತು ಇತರೆ ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ.
ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ನಾಗರಿಕ ನಾವಿಕರು ಹಾಗೂ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ಎಂದು ಸೆಂಟ್ರಲ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ. ಈ ನಡುವೆ ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಬಹ್ರೇನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಡೆಗೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆಯೆಂದು ವರದಿಯಾಗಿದೆ. ಕತಾರ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಒಳಬಂದ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದಿರುವುದಾಗಿ ತಿಳಿಸಿದೆ.
ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.ಯುದ್ಧದ ಅವಧಿಯಲ್ಲಿ ಇರಾನ್ ಈ ಜಲಸಂಧಿಯ ಮೇಲೆ ಹಿಡಿತ ಸಾಧಿಸಿದ್ದರಿಂದ ಜಾಗತಿಕ ಇಂಧನ ಬಿಕ್ಕಟ್ಟು ಉಂಟಾಗಿತ್ತು. ಆದರೆ ಬ್ಯಾರೆಲ್‌ಗೆ 120 ಡಾಲರ್‌ವರೆಗೆ ಏರಿದ್ದ ತೈಲ ಬೆಲೆ ನಂತರ ಗಮನಾರ್ಹವಾಗಿ ಇಳಿಕೆಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಅವರು ಇರಾನ್ ಯುದ್ಧಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದವು ಅಂತ್ಯಗೊಂಡಿದೆ ಎಂದು ಹೇಳಿದ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಇರಾನ್ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಈಗ ಅದರ ಪರಿಣಾಮವನ್ನು ಅನುಭವಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್‌್ಸನಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಎಚ್ಚರಿಕೆ ನೀಡಲಾಗಿದ್ದು, ನೆರೆಯ ಕತಾರ್‌ನಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ. ಕತಾರ್‌ನಲ್ಲಿ ಕ್ಷಿಪಣಿ ಎಚ್ಚರಿಕೆ ಸೈರನ್ ಮೊಳಗಿದ ಬಳಿಕ, ಇರಾನ್‌ನಿಂದ ಬಂದ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಕತಾರ್ ಸೇನೆ ತಿಳಿಸಿದೆ.
ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕದ 5ನೇ ನೌಕಾಪಡೆಯ ನೆಲೆಯಾಗಿರುವ ಬಹ್ರೇನ್‌ನಲ್ಲೂ ಕ್ಷಿಪಣಿ ದಾಳಿ ಎಚ್ಚರಿಕೆ ನೀಡಲಾಗಿದೆ.ಹೋರ್ಮುಜ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊಂದಿದ್ದ ಕಂಟೇನರ್ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದ್ದು, ಎಂಜಿನ್ ವಿಭಾಗಕ್ಕೆ ತೀವ್ರ ಹಾನಿಯಾಗಿದೆ. ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್,ಮುಂದಿನ ಆದೇಶದವರೆಗೆ ಹೋರ್ಮುಜ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಘೋಷಿಸಿದ್ದು,ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಅಮೆರಿಕದ ದಾಳಿಗಳು ಬಂದರ್ ಅಬ್ಬಾಸ್, ಸಿರಿಕ್ ಸೇರಿದಂತೆ ಜಲಸಂಧಿಯ ಕರಾವಳಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದವು. ಸಾವುನೋವು ಮತ್ತು ಹಾನಿಯ ಕುರಿತು ಇರಾನ್ ತಕ್ಷಣ ಯಾವುದೇ ಮಾಹಿತಿ ನೀಡಿಲ್ಲ.ಇದೇ ವೇಳೆ, ಹೊಸ ಪರಮೋಚ್ಚ ನಾಯಕ ಅಯತುಲ್ಲಾ ಮೊಜ್ತಬಾ ಖಮೇನಿ, ತಮ್ಮ ತಂದೆ ಅಯತುಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಲೇಬೇಕು ಎಂದು ಹೇಳಿದ್ದಾರೆ.
