Homeರಾಜಕೀಯನಾಳೆ ಸಿದ್ದರಾಮಯ್ಯ ರಾಜೀನಾಮೆ..? ಡಿಕೆಶಿಗೆ ಸಿಎಂ ಪಟ್ಟ ಫಿಕ್ಸ್..?

ನಾಳೆ ಸಿದ್ದರಾಮಯ್ಯ ರಾಜೀನಾಮೆ..? ಡಿಕೆಶಿಗೆ ಸಿಎಂ ಪಟ್ಟ ಫಿಕ್ಸ್..?

Siddaramaiah's resignation tomorrow..? DK Shivakumar Next CM

ಬೆಳವಣಿಗೆಯ ವೇಳಾ ಪಟ್ಟಿ
*ಸಿಎಂ ಸಿದ್ದರಾಮಯ್ಯ ನಾಳೆ ಬೆಳಗ್ಗೆ 9 ಗಂಟೆಗೆ ತಮ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಾಹಾರ ಕೂಟ ಆಯೋಜಿಸಿದ್ದು, ಎಲ್ಲಾ ಸಚಿವರಿಗೂ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.
*ಬೆಳಗ್ಗೆ 10.30ಕ್ಕೆ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್‌ ಗೆಲ್ಹೋಟ್‌ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಅವರು ಸಮಯ ಕೇಳಿದ್ದಾರೆ.
*ಬಹುತೇಕ ಇದನ್ನು ರಾಜೀನಾಮೆ ನೀಡಲು ಎಂದು ವಿಶ್ಲೇಷಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್‌‍ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ ಇದೆ.
*ಸಿಎಂ ಆಗಿ ಡಿ.ಕೆ.ಶಿಕುಮಾರ್‌ ಶನಿವಾರ ಅಥವಾ ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ.

ಬೆಂಗಳೂರು, ಮೇ 27- ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗ ಖಚಿತವಾಗುತ್ತಿದ್ದಂತೆ, ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ. ಸಿದ್ದರಾಮಯ್ಯ ಅವರ ರಾಜೀನಾಮೆ, ಮುಂದಿನ ಮುಖ್ಯಮಂತ್ರಿ ಆಯ್ಕೆ ಹಾಗೂ ಪಕ್ಷದ ಸಾರಥ್ಯ ಬದಲಾವಣೆ ಕುರಿತು ಮಹತ್ವದ ಚರ್ಚೆಗಳು ಶುರುವಾಗಿವೆ.

ಡಿ.ಕೆ.ಶಿವಕುಮಾರ್‌ ಮುಂದಿನ ಮುಖ್ಯಮಂತ್ರಿ ಎಂದು ಖಚಿತವಾಗುತ್ತಿದ್ದರೂ, ಪರ್ಯಾಯ ಆಯ್ಕೆ ಮತ್ತು ಸಾಧ್ಯತೆಗಳ ಬಗ್ಗೆ ಸಿದ್ದರಾಮಯ್ಯ ಅವರ ಆಪ್ತರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.
ಈವರೆಗಿನ ಖಚಿತ ಮಾಹಿತಿ ಪ್ರಕಾರ ನಾಳೆ ಅಥವಾ ನಾಡಿದ್ದು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ.

ದೆಹಲಿಯ ಭೇಟಿ ಬಳಿಕ, ನಿನ್ನೆ ತಡ ರಾತ್ರಿ ಯಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್ತರ ಜೊತೆ ನಿರಂತರವಾಗಿ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಇಂದು ಬೆಳಗ್ಗೆ ನೆಪ ಮಾತ್ರಕ್ಕೆ ನೆಹರೂ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ಮನೆಗೆ ಮರಳಿದರು. ಅಲ್ಲಿ ಆಪ್ತ ಸಚಿವರು, ಶಾಸಕರು, ಪ್ರಮುಖ ನಾಯಕರ ಜೊತೆ ಕ್ಷಣಕ್ಷಣದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಸಿದ್ದರಾಮಯ್ಯ ನಿರ್ಗಮನದ ಸುಳಿವು ದೊರೆಯುತ್ತಿದ್ದಂತೆ ಆಪ್ತರ ದಂಡೇ ಆಗಮಿಸಿ ರಾಜೀನಾಮೆ ನೀಡದಂತೆ ಒತ್ತಡ ಹೇರಲಾರಂಭಿಸಿತ್ತು. ಒಂದು ವೇಳೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾದರೆ, ಡಿ.ಕೆ.ಶಿವಕುಮಾರ್‌ ಅವರನ್ನು ಹೊರತು ಪಡಿಸಿ ಪರ್ಯಾಯ ನಾಯಕರಿಗೆ ಮಣೆ ಹಾಕುವಂತೆ ಆಪ್ತರು, ನಾಯಕರು ಆಗ್ರಹಿಸಿದ್ದಾರೆ.

ಮೂಲಗಳ ಪ್ರಕಾರ ನಿನ್ನೆ ದೆಹಲಿಯಲ್ಲಿ ನಡೆದ 7 ಗಂಟೆಗಳ ಮ್ಯಾರಾಥಾನ್‌ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಪದತ್ಯಾಗಕ್ಕೆ ಒಲ್ಲದ ಮನಸ್ಸಿನಿಂದಲೇ ಸಮತಿ ಸೂಚಿಸಿ ಬಂದಿದ್ದಾರೆ ಎನ್ನಲಾಗಿದೆ.

ಚರ್ಚೆಯ ವೇಳೆಯಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸ್ಥಾನದ ಜೊತೆಗೆ ಪುತ್ರ ವಿಜಯೇಂದ್ರನಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಇಂಗಿತವನ್ನು ಹೈಕಮಾಂಡ್‌ ವ್ಯಕ್ತಪಡಿಸಿದೆ. ಒಟ್ಟು ನಾಲ್ಕು ಉಪಮುಖ್ಯಮಂತ್ರಿ ಪೈಕಿ ಅಲ್ಪಸಂಖ್ಯಾತ ಸಮುದಾಯದ ಜಮೀರ್‌ ಅಹಮದ್‌ಖಾನ್‌, ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ, ಲಿಂಗಾಯಿತ ಸಮುದಾಯದ ಎಂ.ಬಿ.ಪಾಟೀಲ್‌ ಅವರು ಅವಕಾಶ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಇದನ್ನು ಸಿದ್ದರಾಮಯ್ಯ ಅವರ ಆಪ್ತ ಬಣ ಒಪ್ಪಲು ತಯಾರಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ, ಶಾಸಕಾಂಗ ಸಭೆಯಲ್ಲಿ ಬಲಾಬಲ ಪ್ರದರ್ಶನವಾಗಲಿ, ಶಾಸಕರ ಅಭಿಪ್ರಾಯ ಆಧರಿಸಿ ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗಲಿ ಎಂದು ಪಟ್ಟು ಹಿಡಿದಿದ್ದಾರೆ. ಇದು ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ಕೆರಳಿದೆ.

ಸಿದ್ದರಾಮಯ್ಯ ಅವರು ಹೈಕಮಾಂಡ್‌ ಜೊತೆ ಸಮಾಲೋಚನೆ ಬಳಿಕ ನೇರವಾಗಿ ತಡರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ ಇನ್ನೂ ದೆಹಲಿಯಲ್ಲೇ ಉಳಿದಿದ್ದು, ವರಿಷ್ಠರನ್ನು ಭೇಟಿ ಮಾಡಿ ಕುರ್ಚಿ ಗಟ್ಟಿಮಾಡಿಕೊಂಡ ನಂತರವೇ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರ ನಿರ್ಗಮನದ ಬಳಿಕ ಪರಿಶಿಷ್ಟ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಡಗಳು ಕೇಳಿ ಬರುತ್ತಿವೆ.

ಸಚಿವರ ಉಪಾಹಾರ ಕೂಟ:
ನಾಳೆ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಾಹಾರ ಕೂಟಕ್ಕೆ ಆಗಮಿಸುವಂತೆ ಎಲ್ಲಾ ಸಚಿವರಿಗೂ ಮುಖ್ಯಮಂತ್ರಿ ಕಚೇರಿಯಿಂದ ಸಂದೇಶ ರವಾನೆಯಾಗಿದೆ. ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಿಂದ ನೇರವಾಗಿ ಉಪಾಹಾರ ಕೂಟಕ್ಕೆ ಆಗಮಿಸುತ್ತಾರೆ ಎಂದು ತಿಳಿದು ಬಂದಿದೆ.

ನಾಳೆ ಶಾಸಕಾಂಗ ಸಭೆ:
ಇಂದು ಸಂಜೆ ಕರ್ನಾಟಕ ಕಾಂಗ್ರೆಸ್‌‍ ಉಸ್ತುವಾರಿ ನಾಯಕ ರಣದೀಪ್‌ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದು, ಸಚಿವರು, ಶಾಸಕರ ಜೊತೆ ಚರ್ಚೆ ನಡೆಸಲಿದ್ದಾರೆ. ನಾಳೆ ಅಥವಾ ನಾಡಿದ್ದು ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ನೂತನ ಮುಖ್ಯಮಂತ್ರಿಯ ಆಯ್ಕೆಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಶಾಸಕಾಂಗ ಸಭೆಯಲ್ಲಿ ಅಧಿಕೃತವಾಗಿ ಸಿದ್ದರಾಮಯ್ಯ ರಾಜೀನಾಮೆಯನ್ನು ಪ್ರಕಟಿಸಲಿದ್ದಾರೆ. ಹೈಕಮಾಂಡ್‌ ಮುಂದಿನ ಶಾಸಕಾಂಗ ನಾಯಕನ ಹೆಸರನ್ನು ಸೂಚ್ಯವಾಗಿ ಮಾಹಿತಿ ನೀಡಲಿದೆ. ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂಬ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ.

ಎಂ.ಬಿ.ಪಾಟೀಲ್‌ ಅಪಸ್ವರ:
ಈ ನಡುವೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ನಾಯಕತ್ವ ಬದಲಾವಣೆ ಎಂಬುದು ಕೇವಲ ವದಂತಿ, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಿದ್ದಾರೆ.

ಕೊನೆ ಪ್ರಯತ್ನ:
ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಒತ್ತಡಕ್ಕೆ ಮಣಿಯುತ್ತಿಲ್ಲ, ಹೈಕಮಾಂಡ್‌ಗೆ ಕೊಟ್ಟ ಮಾತಿಗೆ ಬದ್ಧನಾಗಿರುತ್ತೇನೆ. ರಾಜ್ಯಪಾಲರನ್ನು ಭೇಟಿ ಮಾಡಿ ನಾಳೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೆ ಎಂದು ತಿಳಿಸಲಾಗಿದೆ.

ಕೊನೆಯ ಪ್ರಯತ್ನವಾಗಿ ಸಿದ್ದರಾಮಯ್ಯ ಅಪ್ತರು ಸಾಮಾಜಿಕ ನ್ಯಾಯ, ಅಹಿಂದ ಮತಗಳ ಕ್ರೂಢೀಕರಣ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಸೇರಿದಂತೆ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿ ಹೈಕಮಾಂಡ್‌ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
2023ರ ಮೇ ನಲ್ಲಿ ಆಗಿದ್ದ ಒಪ್ಪಂದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂ ಪ್ರೇರಿತವಾಗಿ ಅಧಿಕಾರ ತ್ಯಾಗಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಯಾರ ಒತ್ತಡವೂ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌‍ ಪಕ್ಷ ಅಹಿಂದ ವರ್ಗದ ಅಸಹನೆಯನ್ನು ತಣಿಸುವ ಪ್ರಯತ್ನ ಮಾಡುತ್ತಿದೆ.

ಪಕ್ಷದ ಸಾರಥ್ಯ ಬದಲಾವಣೆ:
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ, ಡಿ.ಕೆ.ಶಿವಕುಮಾರ್‌ ಅವರಿಗೆ ಪಟ್ಟಾಭಿಷೇಕವಾದ ಬಳಿಕ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಬಣದ ಆಪ್ತ ಸತೀಶ್‌ ಜಾರಕಿಹೊಳಿ ಪ್ರತಿಷ್ಠಾಪನೆಗೊಳ್ಳಲಿದ್ದಾರೆ. ಎಂ.ಬಿ.ಪಾಟೀಲ್‌, ಈಶ್ವರ್‌ ಖಂಡ್ರೆ ಅವರ ಹೆಸರುಗಳು ಚಾಲ್ತಿಯಲ್ಲಿವೆ.ಇತ್ತೀಚಿನವರೆಗೂ ಪಕ್ಷದ ನಾಯಕತ್ವ ಡಿ.ಕೆ.ಶಿವಕುಮಾರ್‌ ಅವರ ಸ್ವಾಧೀನದಲ್ಲಿತ್ತು. ಸರ್ಕಾರದ ಚುಕ್ಕಾಣಿ ಸಿದ್ದರಾಮಯ್ಯ ಅವರ ಬಳಿ ಇತ್ತು. ನಿನ್ನೆಯ ಬೆಳವಣಿಗೆ ಬಳಿಕ ಇದು ಅದಲು ಬದಲಾಗುವ ಸಾಧ್ಯತೆ ಇದೆ.

RELATED ARTICLES

Latest News