ಬೆಂಗಳೂರು,ಜು.11- ಅಪರಾಧ ನಡೆದ ಸ್ಥಳದಲ್ಲಿಯೇ ವೈಜ್ಞಾನಿಕ ಪರಿಶೀಲನೆ ನಡೆಸಲು ಹಾಗೂ ಅತ್ಯುನ್ನತ ಗುಣಮಟ್ಟದ ಸಾಕ್ಷ್ಯಾಗಳನ್ನು ತ್ವರಿತವಾಗಿ ಸಂಗ್ರಹಿಸಲು ನೆರವಾಗುವಂತಹ ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವಾಹನಗಳು ಹಾಗೂ ಬೊಲೆರೋ ವಾಹನಗಳನ್ನು ಸರ್ಕಾರ ಪೊಲೀಸ್ ಇಲಾಖೆಗೆ ನೀಡಿದೆ
.
ರಾಜ್ಯದ ಜಿಲ್ಲಾ ಪೊಲೀಸ್ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್‌ಗಳು ಹಾಗೂ 75 ಬೊಲೆರೋ ವಾಹನಗಳ ಲೋಕಾರ್ಪಣೆ ಸಮಾರಂಭಕ್ಕೆ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದರು.ರಾಜ್ಯದಲ್ಲಿ ನ್ಯಾಯ ವಿಜ್ಞಾನ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಕ್ರಮವಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 20.40 ಕೋಟಿ ರೂ. ವೆಚ್ಚದಲ್ಲಿ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವಾಹನಗಳನ್ನು ಸಮರ್ಪಿಸಲಾಗಿದೆ.
ಈ ವಾಹನಗಳು ಅತ್ಯಾಧುನಿಕ ನ್ಯಾಯ ವಿಜ್ಷಾನ ಪರೀಕ್ಷಾ ಉಪಕರಣಗಳು ಹಾಗೂ ಡಿಜಿಟಲ್ ಟ್ರಿಯಾಜ್ ಸೌಲಭ್ಯಗಳನ್ನು ಹೊಂದಿವೆ. ಇದರಿಂದಾಗಿ ಪೊಲೀಸ್ ಇಲಾಖೆ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಯಾಗಿ ವೈಜ್ಞಾನಿಕ ಅಪರಾಧ ಸ್ಥಳ ತನಿಖೆಯ ಸಾಮರ್ಥ್ಯವು ಗಣನೀಯವಾಗಿ ಬಲಗೊಳ್ಳಲಿದೆ.
ಈ ವಾಹನಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿಯೇ ನ್ಯಾಯ ವಿಜ್ಞಾನ ಸೇವೆಗಳು ಲಭ್ಯವಾಗುವಂತೆ ಮಾಡಿ ಅಪರಾಧ ತನಿಖೆಗೆ ತ್ವರಿತ ಹಾಗೂ ಪರಿಣಾಮಕಾರಿ ವೈಜ್ಞಾನಿಕ ಬೆಂಬಲವನ್ನು ಒದಗಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಮೊಬೈಲ್ ಫೊರೆನ್ಸಿಕ್ ವಾಹನ ಲಭ್ಯವಾಗುವುದರಿಂದ ಸೀನ್ ಆಫ್ ಕ್ರೈಂ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಅಪರಾಧ ಸ್ಥಳವನ್ನು ಇನ್ನಷ್ಟು ವ್ಯವಸ್ಥಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸಲು ನೆರವಾಗಿದೆ.
75 ಬೊಲೆರೋ ವಾಹನಗಳು: ಅತ್ಯಾಧುನಿಕ 32 ಮೊಬೈಲ್ ಫೋರೆನ್ಸಿಕ್ ವಾಹನಗಳಲ್ಲದೇ, ಹೊಸದಾಗಿ ಖರೀದಿಸಲಾದ 75 ಬೊಲೆರೋ ವಾಹನಗಳ ಸೇರ್ಪಡೆಯಿಂದ ರಾಜ್ಯ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಯಾಗಲಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರಿಗೆ ಸಮಯೋಚಿತ, ದಕ್ಷ ಮತ್ತು ಜನಸ್ನೇಹಿ ಪೊಲೀಸ್ ಸೇವೆ ಒದಗಿಸುವಲ್ಲಿ ನೆರವಾಗಲಿದೆ.
