ಬೆಂಗಳೂರು,ಮೇ31-ಪತ್ನಿಯನ್ನು ಪತಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ದಾಸರಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗಮ(42) ಕೊಲೆಯಾದ ಗೃಹಿಣಿ. ದಲ್ಲಾಳಿ ಕಣಿಮಾದಯ್ಯ ಕೊಲೆ ಆರೋಪಿ. ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಾಗಮ ಮತ್ತು ಕಣಿಮಾದಯ್ಯ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಕಣಿಮಾದಯ್ಯ ನಾಗಮನ ನಡತೆ ಬಗ್ಗೆ ಅನುಮಾನಗೊಂಡು ಜಗಳವಾಡುತ್ತಿದ್ದನಂತೆ.
ಇಂದು ಬೆಳಗ್ಗೆ 7.30ರ ಸಮಯದಲ್ಲಿ ಮನೆಯಲ್ಲಿ ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಒಂದು ಹಂತದಲ್ಲಿ ಕಣಿಮಾದಯ್ಯ ಮಚ್ಚು ತೆಗೆದುಕೊಂಡು ನಾಗಮನ ತಲೆ, ಕೈಕಾಲು ಮುಂತಾದ ಕಡೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.
ಸುದ್ದಿ ತಿಳಿದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಣಿಮಾದಯ್ಯನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
