Homeಕ್ರೀಡಾ ಸುದ್ದಿ2ನೇ ಬಾರಿಗೆ ಆರ್‌ಸಿಬಿಗೆ ಐಪಿಎಲ್ ಕಿರೀಟ : ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮಾಚರಣೆ

2ನೇ ಬಾರಿಗೆ ಆರ್‌ಸಿಬಿಗೆ ಐಪಿಎಲ್ ಕಿರೀಟ : ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮಾಚರಣೆ

RCB wins IPL title for the second time: Fans' celebrations reach their peak

ಬೆಂಗಳೂರು, ಜೂ.1- ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಟಾಟಾ ಐಪಿಎಲ್‌-2026 ಚಾಂಪಿಯನ್‌ ಆಗುತ್ತಿದ್ದಂತೆ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಿಸಿದ್ದಾರೆ.ಈ ನಡುವೆ ಕೆಲವೆಡೆ ಅಭಿಮಾನಿಗಳ ಹುಚ್ಚಾಟ ಪರಾಕಾಷ್ಠೆಗೆ ತಲುಪಿ ಪೊಲೀಸರು ಲಾಠೀಚಾರ್ಜ್‌ ನಡೆಸಿದ ಘಟನೆ ನಡೆದಿದೆ.

ಇಡೀ ಪಂದ್ಯದ ರೋಚಕ ಕ್ಷಣಗಳನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳ ದಂಡು ಬೆಂಗಳೂರು ತಂಡ ಗೆಲುವು ದಾಖಲಿಸುತ್ತಿದ್ದಂತೆಯೇ ಸಂಭ್ರಮಿಸಿದ್ದಾರೆ.ಮಾಲ್‌, ರೆಸ್ಟೋರೆಂಟ್‌, ಪಬ್‌ಗಳು ಸೇರಿದಂತೆ ಕೆಲವೆಡೆ ನೇರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಜಮಾಯಿಸಿದ್ದ ಯುವಕ-ಯುವತಿಯರು ಪ್ರತೀಕ್ಷಣವನ್ನು ಕಣ್ತುಂಬಿಕೊಂಡು ಖುಷಿಯಲ್ಲಿ ತೇಲಾಡಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಆರ್‌ ಆರ್‌ ನಗರ, ಇಂದಿರಾನಗರ ಸೇರಿದಂತೆ ಹಲವೆಡೆ ಸಾವಿರಾರು ಅಭಿಮಾನಿಗಳು ಆರ್‌ಸಿಬಿ ರಸ್ತೆಗಿಳಿದು ಬಾವುಟಗಳನ್ನು ಪ್ರದರ್ಶಿಸುತ್ತಾ ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ.ಬೆಂಗಳೂರು ನಗರ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಎಲ್ಲೆಡೆ ಬಿಗಿಭದ್ರತೆ ಕಲ್ಪಿಸಿ ರಸ್ತೆಗಿಳಿದಿದ್ದ ಯುವ ಸಮುದಾಯಕ್ಕೆ ಖಡಕ್‌ ಎಚ್ಚರಿಕೆ ನೀಡಿ ಅವರನ್ನು ಮನೆಗೆ ಕಳುಹಿಸಿದ್ದಾರೆ.

ಮಂಡ್ಯದ ಪ್ರಮುಖ ಸಂಜಯ್‌ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಅಭಿಮಾನಿಗಳು ಮಧ್ಯರಾತ್ರಿ ಗೆಲುವಿನ ಕೇಕೆ ಹಾಕಿದ್ದಾರೆ. ರಸ್ತೆಗಳಲ್ಲಿ ಓಡಾಡುವ ಬಸ್ಸು, ಲಾರಿಗಳ ಮೇಲೇರಿ ಕುಣಿಯುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ.ಗುಂಪು ಹೆಚ್ಚಾಗುತ್ತಿದ್ದಂತೆಯೇ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಪರಿಸ್ಥಿತಿ ಕೈಮೀರುವ ಸಂದರ್ಭದಲ್ಲಿ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ.

ಇಷ್ಟಾದರೂ ಕೆಲವರು ಮುಂಜಾನೆವರೆಗೂ ಖುಷಿಯಲ್ಲೇ ತೇಲಾಡಿದ್ದಾರೆ.ಹುಬ್ಬಳ್ಳಿಯ ಕಿತ್ತೂರು ಚೆನ್ನಮ ವೃತ್ತದಲ್ಲೂ ಕೂಡಾ ಜಮಾಯಿಸಿದ್ದ ಸಾವಿರಾರು ಮಂದಿ ಪೊಲೀಸರು ಎಚ್ಚರಿಕೆ ನೀಡಿದರೂ ಮೊಂಡಾಟ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ನೂರಾರು ಯುವಕರು ಪಟಾಕಿ ಸಿಡಿಸಿ ಬಣ್ಣಗಳನ್ನು ಎರಚಿ ಸಂಭ್ರಮಿಸಿದ್ದಾರೆ. ಪೊಲೀಸರು ಅವರನ್ನು ತಡೆದು ಮನೆಗಳಿಗೆ ಕಳುಹಿಸಿದ್ದಾರೆ.ಬಾಗಲಕೋಟೆಯ ಹಲವೆಡೆ ಸಂಭ್ರಮ ಮನೆ ಮಾಡಿದ್ದು, ವಿದ್ಯಾಗಿರಿ ಎಂಜಿನಿಯರಿಂಗ್‌ ವೃತ್ತದಲ್ಲಿ ನೂರಾರು ಮಂದಿ ಕುಣಿಯುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದಾಗ ಪೊಲೀಸರು ಮೊದಲು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೂ ಅಭಿಮಾನಿಗಳು 2 ಗಂಟೆಯಾದರೂ ರಸ್ತೆಯಲ್ಲೇ ಕುಣಿಯುತ್ತಿದ್ದಾಗ ಪೊಲೀಸರು ಲಾಠಿ ಬೀಸಿ ಅವರನ್ನು ಚದುರಿಸಿದ್ದಾರೆ.

ಬೀದರ್‌, ಕಲಬುರಗಿ, ದಾವಣಗೆರೆ, ಮೈಸೂರು ಸೇರಿದಂತೆ ಹಲವೆಡೆ ಮುಂಜಾನೆಯವರೆಗೂ ಸಂಭ್ರಮಾಚರಣೆ ನಡೆದಿದೆ. ಪೊಲೀಸರು ಅಲರ್ಟ್‌ ಆಗಿ ಕೆಲವೆಡೆ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.

RELATED ARTICLES

Latest News