ಬೆಂಗಳೂರು, ಜು.30: ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯವೂ ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ನಿರ್ದೇಶನದ ಬೆನ್ನಲ್ಲೇ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಕರ್ನಾಟಕ ಬಂದ್ ನಡೆಸುವ ಕುರಿತು ನಾಳೆ ಮಹತ್ವದ ಸಭೆ ನಡೆಯಲಿದೆ.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳ ಮುಖಂಡರು ಚರ್ಚೆ ನಡೆಸಲಿದ್ದಾರೆ.ನಾಳೆ ಬೆಳಿಗ್ಗೆ 11 ಗಂಟೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಸಾರಾ ಗೋವಿಂದು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂಬ ಒತ್ತಾಯದೊಂದಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಜೊತೆಗೆ ರಾಜ್ಯವ್ಯಾಪಿ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಈ ಕುರಿತು ಮಾಹಿತಿ ನೀಡಿರುವ ವಾಟಾಳ್ ನಾಗರಾಜ್, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದು, ಬಂದ್ ಕುರಿತು ನಾಳೆಯ ಸಭೆಯಲ್ಲಿ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ತಾರಕಕ್ಕೇರಿದ ಕಾವೇರಿ ಹೋರಾಟ
ಮಂಡ್ಯ,ಜು.30- ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು, ರೈತಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಭುಗಿಲೆದ್ದು ಹೋರಾಟ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲೂ ಪ್ರತಿಭಟನೆಗಳು ನಡೆದಿದ್ದು, ಕಾವೇರಿ ಹೋರಾಟವು ಕಿಚ್ಚು ತಾರಕಕ್ಕೇರಿದೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸಿದರು.
ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ನೀರಿಲ್ಲದೆ ಬರಿದಾಗುತ್ತಿವೆ. ಮಳೆ ಕೊರತೆಯಿಂದ ಜಲಾಶಯಗಳು ಭರ್ತಿಯಾಗಿಲ್ಲ. ಆಣೆಕಟ್ಟುಗಳಲ್ಲಿರುವ ನೀರು ಕುಡಿಯುವುದಕ್ಕೆ ಮಾತ್ರವಿದೆ. ಆದರೆ ಮೇಲೆ 15 ದಿನಗಳ ಕಾಲ 3500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಯಾವ ಮಾನದಂಡದ ಆಧಾರಿಸಿ ಶಿಫಾರಸು ಮಾಡಿದೆ ಎಂದು ಪ್ರಶ್ನಿಸಿದರು.
ಕರವೇ ಹೋರಾಟ:
ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವತ್ತದಲ್ಲಿ ಹೋರಾಟ ನಡೆಸಿದರು. ವೇದಿಕೆಯ ಕಾರ್ಯಕರ್ತರು ಕಲ್ಲುಗಳನ್ನು ಹೊತ್ತುಕೊಂಡರೇ ಮಹಿಳೆಯರು ಬಿಂದಿಗೆಯನ್ನು ತಲೆ ಮೇಲೆ ಹೊತ್ತು, ಒಣಗಿದ ಕಬ್ಬಿನ ಜೊಲ್ಲೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ವೇದಿಕೆ ಅಧ್ಯಕ್ಷ ಎಸ್.ವೇಣು ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸಿಗೆ ಮಣಿದು ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಮಾಡಬಾರದು. ಇಲ್ಲಿನ ರೈತರ ಹಿತವನ್ನು ಬಲಿಕೊಡಬಾರದು. ಸಂಕಷ್ಟ ಪರಿಸ್ಥಿತಿಯಲ್ಲಿರುವ ಜನರನ್ನು ರೈತನನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸುನಾಥ ಕಷ್ಣ, ಮಾ.ಸೋ. ಚಿದಾನಂದ, ಕೆ.ಟಿ.ಶಂಕರೇಗೌಡ, ಭಾರತಿ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಬಿಜೆಪಿ ಲಾಲಿಪಪ್ ಚಳವಳಿ:
ಬಿಜೆಪಿ ವತಿಯಿಂದ ಲಾಲಿಪಪ್, ಹುರುಳಿಕಾಳು ಚಳವಳಿ ನಡೆಸಲಾಯಿತು. ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಲಾಲಿಪಪ್ ಗಳನ್ನು ಹಂಚಿದರೆ, ಕಾರ್ಯಕರ್ತರು ಹುರುಳಿಕಾಳು ಮುಷ್ಟಿಕ್ಕೊಂಡು ಪ್ರತಿಭಟಿಸಿದರು.
ರಸ್ತೆ ತಡೆ:
ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಿ ರೈತಸಂಘ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವತ್ತದಲ್ಲಿ ಪ್ರತಿಭಟನೆ ನಡೆಸಿದರು.ನೀರೇ ಇಲ್ಲದಿದ್ದಾಗ ತಮಿಳುನಾಡಿಗೆ ನೀರು ಕೊಡಿ ಎಂದರೆ ಎಲ್ಲಿ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಪ್ರಭಾವತಿ, ಶಿವಣ್ಣ, ಗೋಪಾಲಪುರ ಸುರೇಶ್, ಕೋಣನಹಳ್ಳಿ ಜವರೇಗೌಡ, ಮಂಜೇಗೌಡ, ಕೀಲಾರ ಸೋಮಶೇಖರ್ ಮತ್ತಿತರರು ಇದ್ದರು.
ಕರವೇಯಿಂದ ಹೋರಾಟ: ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸಿಗೆ ಮನ್ನಣೆ ನೀಡದಂತೆ ಕರವೇ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಆರ್.ಅಶೋಕ್ ಕುಮಾರ್ ಮಾತನಾಡಿ, ಮಳೆ ಪರಸ್ಥಿತಿ ಗೊತ್ತಿದ್ದೂ ಕಾವೇರಿ ನೀರು ನಿರ್ವಹಣಾ ಮಂಡಳಿ ನೀರು ಬಿಡುವಂತೆ ಶಿಫಾರಸು ಮಾಡಿರುವುದು ರೈತರಿಗೆ ಆಘಾತವಾಗಿದೆ ಎಂದು ಹೇಳಿದರು.
