ಬೆಂಗಳೂರು,ಜೂ.4-ಬೆಳಗಿನ ಜಾವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಹೋದ ಕಾಮುಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃತ್ಯವೆಸಗಿ ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಸೈಫಲ್ ಮಂಡಲ್ (27) ಬಂಧಿತ ಆರೋಪಿ.ಈತ ಚಿಂದಿ ಆಯುವ ವ್ಯಕ್ತಿ ಎಂದು ಗೊತ್ತಾಗಿದೆ.ಕೇರಳಂ ಮೂಲದ ವಿದ್ಯಾರ್ಥಿನಿ ನಗರದ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಪಟ್ಟಂದೂರು ಅಗ್ರಹಾರದ ಪಿಜಿಯೊಂದರಲ್ಲಿ ನೆಲೆಸಿದ್ದಾರೆ.
ಮೊನ್ನೆ ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಪಿಜಿಯಿಂದ ಹೊರ ಬಂದ ಈ ವಿದ್ಯಾರ್ಥಿನಿ ಟೀ ಕುಡಿಯಲೆಂದು ಸಮೀಪದ ಟೀ ಶಾಪ್ ಗೆ ಹೋಗುತ್ತಿದ್ದರು.ಆ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಚಿಂದಿ ಆಯುತ್ತಿದ್ದ ಆರೋಪಿ ಮಂಡಲ್ ಹಿಂಬಾಲಿಸಿಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದಾನೆ.
ಆತನ ವರ್ತನೆಯಿಂದ ಗಾಬರಿಯಾಗಿ ವಿದ್ಯಾರ್ಥಿನಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ದಾರಿಹೋಕರು ನೆರವಿಗೆ ದಾವಿಸುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದನು. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಮಿಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
