Homeರಾಜ್ಯಕಾಂಗ್ರೆಸ್‌‍ ನಿರಾಶ್ರಿತರಿಗೆ ಆಶ್ರಯ ಕೇಂದ್ರವಾಗಲಿದೆ ಭಾರತ್‌ ಜೋಡೋ ಯುವಕ ಸಂಘ : ಆರ್‌.ಅಶೋಕ್‌ ವ್ಯಂಗ್ಯ

ಕಾಂಗ್ರೆಸ್‌‍ ನಿರಾಶ್ರಿತರಿಗೆ ಆಶ್ರಯ ಕೇಂದ್ರವಾಗಲಿದೆ ಭಾರತ್‌ ಜೋಡೋ ಯುವಕ ಸಂಘ : ಆರ್‌.ಅಶೋಕ್‌ ವ್ಯಂಗ್ಯ

Bharat Jodo Yuvakara Sangh to be a shelter for Congress refugees: R. Ashok

ಬೆಂಗಳೂರು, ಜೂ.4- ಯುವಕರು ಹಾಗೂ ಪಕ್ಷದ ನಡುವೆ ಸಂಪರ್ಕ ಸಾಧಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಭಾರತ್‌ ಜೋಡೋ ಯುವಕ ಸಂಘ ಕಾಂಗ್ರೆಸ್‌‍ ನಿರಾಶ್ರಿತರಿಗೆ ಆಶ್ರಯ ಕೇಂದ್ರವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್‌ ಜೋಡೋ ಕಾಂಗ್ರೆಸ್‌‍ ನಿರಾಶ್ರಿತರಿಗೆ ಆಶ್ರಯ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಿ.ಕೆ. ಅಣ್ಣ, ಭಾರತ್‌ ಜೋಡೋ ಬೇಡ ಮೊದಲು ಕರ್ನಾಟಕ ಜೋಡೋ ಮಾಡಿ. ಭಾರತ ಬಹಳ ದೊಡ್ಡದು ಇದೆ ಎಂದು ವ್ಯಂಗ್ಯಭರಿತವಾಗಿ ಹೇಳಿದರು.

ನಾನು ಯುವಕರನ್ನು ಜೋಡಣೆ ಮಾಡುತ್ತೇನೆ ಎಂದು ಶಿವಕುಮಾರ್‌ ಹೇಳಿದ್ದಾರೆ. ಹಾಗಾದರೆ ಇಷ್ಟು ದಿನ ಮಾಜಿ ಸಿಎಂ ಸಿದ್ಧರಾಮಯ್ಯ ಯುವಕರನ್ನು ಹಾಳು ಮಾಡಿದ್ದರಾ? ಸಿದ್ದರಾಮಯ್ಯ ಹಾಳು ಮಾಡಿದ್ದರು, ಇದು ಕಾಂಗ್ರೆಸ್‌‍ ನಿರುದ್ಯೋಗಿಗಳಿಗೆ ಪಿಂಚಣಿ ಯೋಜನೆ ಎಂದು ಕುಹಕವಾಡಿದರು.

ನೂತನವಾಗಿ ನೇಮಕಾತಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಆದರೆ ನೇಮಕಾತಿಗೆ ಹಣವೇ ಇಲ್ಲ. ಮೂರು ವರ್ಷದಿಂದ ಖೋತಾ ಬಜೆಟ್‌ ತೆರಿಗೆ ಹಾಕಿ ಜನರ ಜೀವ ಹಿಂಡಿ, ಸಾಯಿಸಿದ್ದಾರೆ. ಇನ್ನು ಎಲ್ಲಿಂದ ನೇಮಕಾತಿ ಮಾಡಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು.

ಈ ಮೊದಲು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಅದಕ್ಕೆ ಹಣವನ್ನೇ ಮೀಸಲಿಟ್ಟಿರಲಿಲ್ಲ. ಹೊಸದಾಗಿ ಘೋಷಣೆ ಮಾಡಿರುವುದು ಪ್ರಚಾರದ ಒಂದು ಭಾಗವೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಆಕ್ಷೇಪಿಸಿದರು.

ನೂತನ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಜೊತೆಗೆ ಯಾವುದೇ ಹೊಸ ಮುಖಗಳಿಗೂ ಅವಕಾಶ ಇಲ್ಲ ಎಂದು ಗುಡುಗಿದರು.ನಿನ್ನೆ ನಡೆದ ಪ್ರಮಾಣವಚನ ಕಾರ್ಯಕ್ರಮ ಹಳೆ ಸಿನೆಮಾದ ಹೊಸ ಪೋಸ್ಟರ್‌ ಇದ್ದಂತೆ ಇತ್ತು. ರಾಜ್ಯದ ಜನರ ಬದುಕು, ಸಂಕಷ್ಟ ಬದಲಾಗುತ್ತದೆ ಎಂದುಕೊಂಡಿದ್ದರು. ಆದರೆ ಸಿಎಂ ಮನೆ ಮುಂದಿನ ನೇಮ್‌ ಪ್ಲೇಟ್‌ ಬದಲಾಗಿದೆ ಅಷ್ಟೇ ಎಂದು ಕುಹಕವಾಡಿದರು.

ದೇಶದಲ್ಲಿನ ರೈತರ ಆತಹತ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಸಾವು, ಬಾಣಂತಿಯರ ಸಾವು, ಆಸ್ಪತ್ರೆ ಗೋಡೆ ಕುಸಿದು ಸಾವು, ಬೆಂಗಳೂರಿನಲ್ಲಿ ಗುಂಡಿಗಳ ರಸ್ತೆ ಇದೆಲ್ಲ ಜನರ ಮನಸ್ಸಲ್ಲಿ ಆರದ ಗಾಯಗಳಾಗಿ ಉಳಿದುಕೊಂಡಿದೆ. ಜನ ಉತ್ತಮ ಆಡಳಿತ ಬೇಕು ಎಂದು ಕೇಳಿದ್ದರು. ಆದರೆ ಉತ್ತಮ ಆಡಳಿತ ಮಾಡದೇ ಕುರ್ಚಿ ಬದಲಾವಣೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

RELATED ARTICLES

Latest News