ಬೆಂಗಳೂರು, ಜೂ. 6- ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಪಾಲನೆ ಮತ್ತು ಪಕ್ಷ ನಿಷ್ಠೆ ಬಹುಮುಖ್ಯವಾಗಿದ್ದು, ಅದನ್ನು ಮೀರಿ ವರ್ತಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಕೆಲ ಸಚಿವರ ಅಸಮಾಧಾನ ಹಾಗೂ ರಾಜೀನಾಮೆ ತಂತ್ರಗಾರಿಕೆಗಳ ವಿರುದ್ಧ ತೀವ್ರ ಸಿಡಿಮಿಡಿ ವ್ಯಕ್ತಪಡಿಸಿರುವ ಹೈಕಮಾಂಡ್ ನಾಯಕರು, ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆಯಾಗಬೇಕಿರುವುದ ಬಹಿರಂಗವಾಗಿ ನಡೆಯುತ್ತಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಹಾನಿಯಾಗುವಂತೆ ವರ್ತಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡಂತೆ ರಾಜ್ಯಸಭೆಗೆ 3 ಮಂದಿ, ವಿಧಾನಪರಿಷತ್‌ಗೆ 5 ಮಂದಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲೇ ಮುಜುಗರವಾಗುವಂತಹ ಬೆಳವಣಿಗೆಗಳಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿಯವರು ನಿನ್ನೆ ರಾಜ್ಯ ನಾಯಕರ ಜೊತೆ ಚರ್ಚೆ ಮಾಡುವಾಗ ಹಿರಿಯ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ, ಅಸಮಾಧಾನಿತರನ್ನು ಮನವೊಲಿಸುವ ಮೂಲಕ ವಾತಾವರಣ ತಿಳಿ ಮಾಡಿ ಎಂದು ಸಲಹೆ ನೀಡಿದ್ದರು. ನಾಮಪತ್ರ ಸಲ್ಲಿಕೆಯ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಾತುಕತೆ ನಡೆಸಿದ್ದು, ಬಹಿರಂಗ ಹೇಳಿಕೆಗಳನ್ನು ನೀಡುವ ನಾಯಕರನ್ನು ಸಹಿಸಿಕೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ರಾಜ್ಯದಲ್ಲಿನ ಅನಪೇಕ್ಷಣೀಯ ಬೆಳವಣಿಗೆಗಳನ್ನು ನಿಭಾಯಿಸಲು ಮುಖ್ಯಮಂತ್ರಿ ಜೊತೆ ಸಹಕರಿಸುವಂತೆ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅನಂತರದ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರ ಜೊತೆ ಚರ್ಚೆ ನಡೆಸಿದ್ದು, ರಾಜೀನಾಮೆ ಪ್ರಹಸನದ ಬಗ್ಗೆ ಹೈಕಮಾಂಡ್ ಅಸಮಾಧಾನ ಹೊಂದಿದೆ. ದುಡುಕಿನ ನಿರ್ಧಾರ ಬೇಡ, ರಾಜೀನಾಮೆ ಹಿಂಪಡೆದು ಸಂಪುಟದಲ್ಲಿ ಮುಂದುವರೆಯಿರಿ ಎಂದು ಸಲಹೆ ನೀಡಿ, ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಖಾತೆ ಹಂಚಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುವ ಬದಲು ಬಹಿರಂಗ ಹೇಳಿಕೆ ನೀಡಿದ ಸಚಿವ ಕೆ.ಎಚ್.ಮುನಿಯಪ್ಪ ಅವರ ವಿರುದ್ಧವೂ ಆಕ್ಷೇಪಗಳು ಕೇಳಿ ಬಂದಿವೆ. ಸಚಿವರಾಗಲು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸಾಲು ಸರದಿಯಲ್ಲಿ ನಿಂತಿದೆ. ಪಕ್ಷ ನಿಷ್ಠೆ ಹಾಗೂ ಹಿರಿತನವನ್ನು ಪರಿಗಣಿಸಿ ಸಂಪುಟವನ್ನು ರಚಿಸಲಾಗಿದೆ. ಯಾವುದೇ ಇಲಾಖೆ ಕೊಟ್ಟರೂ ಅದನ್ನು ನಿರ್ವಹಿಸಬೇಕು. ಇನ್ನು ಮುಂದೆ ಬಹಿರಂಗ ಹೇಳಿಕೆಗಳ ಮೂಲಕ ತಗಾದೆ ತೆಗೆದರೆ ಅಂತಹವರನ್ನು ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಬದಲಾವಣೆ ಮಾಡುವಂತೆ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿಯವರಿಗೆ ಹೈಕಮಾಂಡ್ ಸಂದೇಶ ತಲುಪಿಸಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ಶಿಸ್ತು ಪಾಲನೆಗೆ ಮೊದಲ ಆದ್ಯತೆ. ಯಾವುದೇ ವಿಚಾರಗಳಿದ್ದರೂ ಆಂತರಿಕ ವೇದಿಕೆಗಳಲ್ಲಿ ಚರ್ಚೆಯಾಗಬೇಕು. ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ನಾಯಕತ್ವದ ವಿರುದ್ಧವಾಗಿ ಆಕ್ಷೇಪ ವ್ಯಕ್ತಪಡಿಸುವವರನ್ನು ಕೈ ಬಿಡುವಂತೆ ರಣದೀಪ್ ಸಿಂಗ್ ಸುರ್ಜೇವಾಲ ಖಡಕ್ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಇನ್ನೂ ಆರಂಭಿಕ ಹಂತದಲ್ಲಿ ಈ ರೀತಿಯ ಬೆಳವಣಿಗೆಗಳಾದರೆ ಭವಿಷ್ಯದಲ್ಲೇ ಇದು ಬಂಡಾಯ ಚಟುವಟಿಕೆಗಳಿಗೆ ಕುಮಕ್ಕು ನೀಡುವಂತಾಗುತ್ತದೆ. ಅದು ಸರ್ಕಾರದ ಸ್ಥಿರತೆಯ ಮೇಲೂ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಹೈಕಮಾಂಡ್ ಸೂಚನೆ ಮೇರೆಗೆ ಡಿ.ಕೆ.ಶಿವಕುಮಾರ್ ಎರಡನೇ ಹಂತದಲ್ಲಿ ಅಸಮಾಧಾನಿತರ ಜೊತೆ ಮಾತುಕತೆ ನಡೆಸಿ, ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ. ಅದು ಸಾಧ್ಯವಾಗದೇ ಇದ್ದರೆ ಅನಿವಾರ್ಯವಾಗಿ ಕೈ ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
