ಬೆಂಗಳೂರು, ಜೂ.8- ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ದ.ಕನ್ನಡ, ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ಮತ್ತಿತರೆಡೆ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಬಳ್ಳಾರಿ :
ಗಣಿನಾಡು ಬಳ್ಳಾರಿಯಲ್ಲಿ ಮಳೆ ಜೋರಾಗಿ ಸುರಿದಿದ್ದು, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರೇಣುಕಾನಗರ, ರಾಣಿಪೇಟೆ ಮತ್ತು ಹಳೆ ತಾಲ್ಲೂಕು ಕಚೇರಿಗಳಲ್ಲಿ ನೀರು ತುಂಬಿದ್ದು, ಹಿಮ್ಸೌ ಆಸ್ಪತ್ರೆ ಒಳಗಡೆ ಕೂಡಾ ನೀರು ನುಗ್ಗಿದ್ದು, ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಜೆಸ್ಕಾಂ ಕಚೇರಿ ಆವರಣವೂ ಕೂಡಾ ಕೆರೆಯಂತಾಗಿದ್ದು, ಟ್ರಾನ್‌್ಸಫಾರ್ಮ್‌ಗಳು ಮುಳುಗಿಹೋಗಿವೆ.
ಚಿತ್ರದುರ್ಗ :
ಕೋಟೆನಾಡು ಚಿತ್ರದುರ್ಗದಲ್ಲಿ ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ ದಾಟಲು ಗ್ರಾಮಸ್ಥರು ಪರದಾಡುವಂತಾಯಿತು.ಚಳ್ಳಕೆರೆ ತಾಲ್ಲೂಕಿನಾದ್ಯಂತೆ ಮಳೆ ಅಬ್ಬರಿಸಿದ್ದು, ಮನೆಗಳಿಗೆ ನೀರು ನುಗ್ಗಿದ್ದು ಎಲೆಕ್ಟ್ರಾನಿಕ್ ಉಪಕರಣಗಳು, ದವಸ ಧಾನ್ಯಗಳು ನೀರಿನಲ್ಲಿ ನಾಶವಾಗಿವೆ.
ಬೆಳಗಾವಿ :
ಕಾನಾಪುರ ತಾಲ್ಲೂಕಿನ ಪಾರಶ್ವಾಡ ಗ್ರಾಮದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು. ಟ್ರ್ಯಾಕ್ಟರ್‌ನಲ್ಲಿ ಜನರನ್ನು ಹಳ್ಳ ದಾಟಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಬಾಗಲಕೋಟೆ :
ಜಿಲ್ಲೆಯ ಮಹಾಲಿಂಗಾಪುರದಲ್ಲಿ ಚನ್ನಗೀರೇಶ್ವರ ದೇವಸ್ಥಾನ ಅಂಗಳ ಜಲಾವೃತಗೊಂಡು ವಲ್ಲಭಾಯಿ ವೃತ್ತದ ಮನೆಯೊಂದು ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.ಹಾವೇರಿಯ ಹರಿಹರ-ಸಮಸಗಿ ರಾಜ್ಯ ಹೆದ್ದಾರಿಯಲ್ಲಿ ಕಳೆದ ಕೆಲವು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.
ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮಾವು, ಬಾಳೆ, ಹೂ, ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹಾಸನ, ಚಿಕ್ಕಮಗಳೂರು, ದ.ಕನ್ನಡ, ಉಡುಪಿ, ಕೊಪ್ಪಳ, ದಾವಣಗೆರೆ ಸೇರಿದಂತೆ ಮತ್ತಿತರೆಡೆ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜೂ.10ರವರೆಗೂ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸೂಚನೆಗಳಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
