Homeರಾಜ್ಯಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ತಾತ್ಕಾಲಿಕ ತಡೆ

ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ತಾತ್ಕಾಲಿಕ ತಡೆ

Temporary stay on recruitment of veterinary officers

ಬೆಂಗಳೂರು, ಜು.27- ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ಹಾಗೂ ದೂರಿನ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಸೇವಾ ಆಯೋಗವು ನಿನ್ನೆ ತುರ್ತು ಸಭೆ ನಡೆಸಿ, ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ನೀಡಿದೆ.

ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಆರೋಪಗಳ ಗಂಭೀರತೆಯನ್ನು ಮನಗಂಡು ಆಯೋಗವು ಕೆಳಕಂಡ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಆಯೋಗದ ಕಾರ್ಯದರ್ಶಿ ಶ್ರೀಮತಿ ಕೆ. ಜ್ಯೋತಿ ಅವರು ತಿಳಿಸಿದ್ದಾರೆ.

ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ ಜುಲೈ 25ರಂದು ಪೊಲೀಸ್ ಇಲಾಖೆ ನೀಡಿರುವ ಪ್ರಾಥಮಿಕ ಮಾಹಿತಿ ವರದಿಯನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಲಾಗಿದೆ.

ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತ ಹಾಗೂ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಾಸ್ತವಾಂಶಗಳ ಕುರಿತ ವಿವರವಾದ ವರದಿಯನ್ನು ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವಂತೆ ಉಪಸಮಿತಿಗೆ ನಿರ್ದೇಶನ ನೀಡಲಾಗಿದೆ.

ತನಿಖಾ ಕಾರ್ಯಕ್ಕೆ ಅಗತ್ಯವಾದ ಆಡಳಿತಾತಕ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ಕೆಪಿಎಸ್ಸಿ ಕಾರ್ಯದರ್ಶಿಯನ್ನು ಹಾಗೂ ಅಗತ್ಯ ಕಾನೂನು ಸಲಹೆ ನೀಡಲು ಕಾನೂನು ವಿಭಾಗದ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಆಂತರಿಕ ತನಿಖಾ ಉಪಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ, ಜುಲೈ 17ರಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಯೋಗವು ನಿರ್ಧರಿಸಿದೆ.

ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News