Homeರಾಜ್ಯತೀವ್ರ ಚರ್ಚೆಗೆ ಗ್ರಾಸವಾಗಿದೆ ಡಿಜಿಟಲ್ ಸಮಾಲೋಚನಾ ವರ್ಗಾವಣಾ ವ್ಯವಸ್ಥೆ

ತೀವ್ರ ಚರ್ಚೆಗೆ ಗ್ರಾಸವಾಗಿದೆ ಡಿಜಿಟಲ್ ಸಮಾಲೋಚನಾ ವರ್ಗಾವಣಾ ವ್ಯವಸ್ಥೆ

Digital consultation transfer system is the subject of intense debate

ಬೆಂಗಳೂರು,ಜು.27- ರಾಜ್ಯ ಸರ್ಕಾರದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿರುವ ಡಿಜಿಟಲ್ ಸಮಾಲೋಚನಾ ವರ್ಗಾವಣೆ ವ್ಯವಸ್ಥೆಯು ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಹೊಸ ಪದ್ಧತಿಯನ್ನು ರದ್ದುಗೊಳಿಸಬೇಕು ಅಥವಾ ಮುಂದಿನ ವರ್ಷಕ್ಕೆ ಮುಂದೂಡಬೇಕು ಎಂಬ ಒತ್ತಡಗಳು ಕೇಳಿಬಂದಿದ್ದು, ಇಲಾಖೆಯಲ್ಲಿ ಪರ-ವಿರೋಧದ ಬಿಸಿ ಮುಟ್ಟಿದೆ.ಇಲಾಖೆಯಲ್ಲಿ ವರ್ಷಗಳಿಂದ ಬೇರೂರಿದ್ದ ಭ್ರಷ್ಟಾಚಾರ, ರಾಜಕೀಯ ಲಾಬಿ ಮತ್ತು ಪ್ರಭಾವಿ ಸ್ಥಳಗಳಿಗೆ (ವಿಶೇಷವಾಗಿ ಬೆಂಗಳೂರು ಹಾಗೂ ಅಧಿಕ ಆದಾಯ ಬರುವ ಪ್ರದೇಶಗಳಿಗೆ) ವರ್ಗಾವಣೆ ಪಡೆಯಲು ನಡೆಯುತ್ತಿದ್ದ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿತ್ತು.

ರಾಜ್ಯ ಸರ್ಕಾರವು ಮೇ 27, 2026 ರಂದು ಕರ್ನಾಟಕ ನಾಗರಿಕ ಸೇವಾ (ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಸಮಾಲೋಚನೆ ಆಧರಿತ ವರ್ಗಾವಣೆ) ನಿಯಮಗಳು-2026 ಅನ್ನು ಅಧಿಕೃತವಾಗಿ ಅಧಿಸೂಚಿಸಿತು. ಹಿರಿಯ ಉಪ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು ಹಾಗೂ ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಯನ್ನು ಕೇವಲ ಡಿಜಿಟಲ್ ಸಮಾಲೋಚನೆ ಮೂಲಕವೇ ನಡೆಸಲು ನಿರ್ಧರಿಸಲಾಗಿತ್ತು.ನೋಂದಣಿ ಕಚೇರಿಗಳನ್ನು ಎ, ಬಿ ಮತ್ತು ಸಿ ವಲಯಗಳಾಗಿ ವಿಂಗಡಿಸಿ, ನಿರ್ದಿಷ್ಟ ಅವಧಿ ಪೂರೈಸಿದವರನ್ನು ಕಡ್ಡಾಯ ವರ್ಗಾವಣೆಗೊಳಪಡಿಸಲು ಕಟ್ಟುನಿಟ್ಟಿನ ಮಾನದಂಡಗಳನ್ನು ರೂಪಿಸಲಾಗಿತ್ತು.

ವರ್ಗಾವಣೆ ಪ್ರಕ್ರಿಯೆ ವಿರೋಧಿಸಲು ಕಾರಣಗಳೇನು? :
ಕರ್ನಾಟಕ ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೌಕರರ ಸಂಘ ಹಾಗೂ ಒಂದು ವರ್ಗದ ಅಧಿಕಾರಿಗಳು ಈ ಡಿಜಿಟಲ್ ಸಮಾಲೋಚನಾ ಪ್ರಕ್ರಿಯೆಯನ್ನು ವಿರೋಧಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಪ್ರಸ್ತುತ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಥವಾ ತರಾತುರಿಯಲ್ಲಿ ವರ್ಗಾವಣೆ ಮಾಡುವುದರಿಂದ ಅಧಿಕಾರಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಮತ್ತು ಕುಟುಂಬದ ನಿರ್ವಹಣೆಗೆ ವ್ಯತ್ಯಯವಾಗುತ್ತದೆ ಎಂಬ ವಾದವನ್ನು ನೌಕರರ ಸಂಘ ಮುಂದಿಟ್ಟಿದೆ.

ಇಲಾಖೆಯಲ್ಲಿ ವರ್ಗಾವಣೆಗೆ ಅರ್ಹವಿರುವ ಒಟ್ಟು ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆಯಿರುವಾಗ (ಶೇಕಡಾ 6ರಷ್ಟು ಮಾತ್ರ), ಇಡೀ ಡಿಜಿಟಲ್ ಸಮಾಲೋಚನಾ ಪ್ರಕ್ರಿಯೆಯನ್ನು ಜಾರಿಗೊಳಿಸುವುದು ಅಪ್ರಾಯೋಗಿಕ ಎಂಬುದು ಅವರ ವಾದ.ಡಿಜಿಟಲ್ ಸಮಾಲೋಚನೆಯಿಂದ ಆಡಳಿತಾತಕ ಸುಧಾರಣೆ ಮತ್ತು ಹಿರಿಯ ಅಧಿಕಾರಿಗಳ ವಿವೇಚನಾ ಅಧಿಕಾರಕ್ಕೆ ಕತ್ತರಿ ಬೀಳಲಿದೆ ಎಂಬುದು ವಿರೋಧಿಸುವವರ ಅಭಿಪ್ರಾಯ.

ಪರವಾಗಿರುವವರ ವಾದ :
ಮತ್ತೊಂದೆಡೆ, ಇಲಾಖೆಯ ಕೆಲ ಪ್ರಾಮಾಣಿಕ ಅಧಿಕಾರಿಗಳು ಮತ್ತು ಸುಧಾರಣಾ ವಾದಿಗಳು ಹೊಸ ಡಿಜಿಟಲ್ ಪದ್ಧತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸಿಂಡಿಕೇಟ್ಗಳಿಗೆ ಬ್ರೇಕ್: ಕೆಲವು ಪ್ರಭಾವಿ ಅಧಿಕಾರಿಗಳು ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಕೇವಲ ಲಾಭದಾಯಕ ಕಚೇರಿಗಳಲ್ಲೇ ವರ್ಷಗಟ್ಟಲೆ ತಿಷ್ಠೆ ಹೂಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಅತ್ಯಗತ್ಯ ಎಂದು ವಾದಿಸಲಾಗಿದೆ.

ಡಿಜಿಟಲ್ ಸಮಾಲೋಚನೆ ಜಾರಿಗೆ ಬಂದರೆ ಯಾವುದೇ ಶಿಫಾರಸು ಇಲ್ಲದೆ, ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ಯೋಗ್ಯ ಸ್ಥಳಗಳಿಗೆ ನಿಯೋಜನೆ ಪಡೆಯಲು ಪ್ರಾಮಾಣಿಕ ಸಿಬ್ಬಂದಿಗೆ ನ್ಯಾಯ ಸಿಗುತ್ತದೆ ಎಂಬುದು ಇವರ ವಾದವಾಗಿದೆ. ಕಂದಾಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ನಡೆದ ಸಭೆಗಳಲ್ಲಿ ಈ ಕುರಿತು ಸಾಧಕ-ಬಾಧಕಗಳ ಚರ್ಚೆ ನಡೆಲಾಗಿದೆ.

ನೌಕರರ ಸಂಘವು ಈ ವ್ಯವಸ್ಥೆಯನ್ನು ಕನಿಷ್ಠ ಒಂದು ವರ್ಷ ಮುಂದೂಡಬೇಕೆಂದು ಪಟ್ಟು ಹಿಡಿದಿದ್ದರೆ, ಸಾರ್ವಜನಿಕ ವಲಯದಲ್ಲಿ ಮತ್ತು ಇಲಾಖೆಯ ಪಾರದರ್ತೆಯನ್ನು ಬಯಸುವವರಿಂದ ಇದಕ್ಕೆ ತೀವ್ರ ಬೆಂಬಲ ವ್ಯಕ್ತವಾಗಿದೆ. ಕಂದಾಯ ಇಲಾಖೆಯು ಈ ಕುರಿತು ಸಾಧಕ-ಬಾಧಕಗಳ ಸಮಗ್ರ ವರದಿಯನ್ನು ಸಿದ್ಧಪಡಿಸುತ್ತಿದ್ದು, ಸರ್ಕಾರದ ಅಂತಿಮ ನಿರ್ಧಾರದ ಮೇಲೆ ಇಲಾಖೆಯ ಮುಂದಿನ ಆಡಳಿತಾತಕ ಸುಧಾರಣೆಗಳು ನಿಂತಿವೆ.

RELATED ARTICLES

Latest News