ನವದೆಹಲಿ,ಜೂ.9-ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪುತ್ತಿದ್ದಾರೆ. ನಾಳೆ ಭಾರತದ ರಾಜಕೀಯದಲ್ಲಿ ಅತಿ ಹೆಚ್ಚು ದಿನಗಳ ಕಾಲ ಸತತವಾಗಿ ಅಧಿಕಾರ ನಡೆಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು 2026ರ ಜೂನ್ 10ರಂದು 4,399 ದಿನಗಳನ್ನು ಪೂರೈಸುವ ಮೂಲಕ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1952ರ ಸಾರ್ವತ್ರಿಕ ಚುನಾವಣೆ ನಂತರ ಗಳಿಸಿದ್ದ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.
ನೆಹರೂ ದಾಖಲೆಯನ್ನು ಮುರಿಯುವುದು ಕೇವಲ ಅಂಕಿಅಂಶಗಳ ಆಟವಲ್ಲ. ಇದು ಭಾರತದ ಮತದಾರರ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆ ಮತ್ತು ಕಳೆದ ಒಂದು ದಶಕದಲ್ಲಿ ದೇಶದ ರಾಜಕೀಯದಲ್ಲಿ ಬಿಜೆಪಿ ಮತ್ತು ನರೇಂದ್ರಮೋದಿಯವರ ಅಪ್ರತಿಮ ಪ್ರಾಬಲ್ಯವನ್ನು ದೃಢಪಡಿಸುತ್ತದೆ.
ಇದು ಭಾರತೀಯ ಪ್ರಜಾಪ್ರಭುತ್ವದ ವಿಕಸನದಲ್ಲಿ ಒಂದು ಹೊಸ ಅಧ್ಯಾಯವಾಗಿ ಉಳಿಯಲಿದೆ. ಇಲ್ಲಿನ ಮುಖ್ಯ ಅಂಶವೆಂದರೆ ಚುನಾಯಿತ ಪ್ರಧಾನಿಯಾಗಿ ಕಳೆದ ಅವಧಿ. ನೆಹರೂ ಅವರು ಸ್ವಾತಂತ್ರ್ಯಾ ನಂತರ 1947 ರಿಂದಲೇ ಅಧಿಕಾರದಲ್ಲಿದ್ದರೂ, ಭಾರತದ ಮೊದಲ ಸಾರ್ವತ್ರಿಕ ಚುನಾವಣೆ (1951-52) ನಡೆದ ನಂತರ ಪ್ರಧಾನಿಯಾಗಿ ಕಳೆದ ದಿನಗಳನ್ನು ಮಾತ್ರವೇ ಈ ಹೋಲಿಕೆಗೆ ಮಾನದಂಡವಾಗಿ ತೆಗೆದುಕೊಳ್ಳಲಾಗಿದೆ. ಮೋದಿ ಅವರು ಮೇ 26, 2014ರಂದು ಅಧಿಕಾರ ಸ್ವೀಕರಿಸಿದ ನಂತರ, ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದಲ್ಲಿ ಮುಂದುವರಿಯುತ್ತಿರುವುದು ಈ ದಾಖಲೆಗೆ ಕಾರಣವಾಗಿದೆ.
ನೆಹರೂ ಅವರ ನಂತರದ ಅವಧಿಯಲ್ಲಿ ಭಾರತದ ರಾಜಕೀಯವು ಕಾಂಗ್ರೆಸ್ ಪಕ್ಷದ ಪ್ರಾಬಲ್ಯದ ಸುತ್ತ ಸುತ್ತುತ್ತಿತ್ತು. ಆದರೆ, ಮೋದಿ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ಮೂಲಕ, ಪಕ್ಷರಹಿತ ಮತ್ತು ಪರ್ಯಾಯ ರಾಜಕೀಯದ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ.
ಮೋದಿ ಅವರ ರಾಜಕೀಯ ಯಶಸ್ಸಿಗೆ ಅಭಿವೃದ್ಧಿಯೊಂದಿಗೆ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಹಿಂದುತ್ವದ ಅಜೆಂಡಾಗಳನ್ನು ಬೆಸೆದಿರುವುದು ಪ್ರಮುಖ ಕಾರಣ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಅವರಿಗೆ ಭದ್ರ ನೆಲೆಯನ್ನು ನೀಡಿದೆ.
ನೆಹರೂ ಅವರು ಪ್ರಧಾನಿಯಾಗಿದ್ದ ಕಾಲಘಟ್ಟಕ್ಕೆ ಹೋಲಿಸಿದರೆ, ಇಂದಿನ ರಾಜಕೀಯ ವ್ಯವಸ್ಥೆಯು ಹೆಚ್ಚು ಸ್ಪರ್ಧಾತಕವಾಗಿದೆ. 1951-52ರಲ್ಲಿ ಕೆಲವೇ ಪಕ್ಷಗಳು ಸ್ಪರ್ಧಿಸುತ್ತಿದ್ದವು, ಆದರೆ ಇಂದು ನೂರಾರು ಪಕ್ಷಗಳು ಮತ್ತು ಪ್ರಾದೇಶಿಕ ಶಕ್ತಿಗಳ ನಡುವೆ ತನ್ನ ಪಕ್ಷವನ್ನು ಮುನ್ನಡೆಸುತ್ತಿರುವುದು ಮೋದಿ ಅವರ ಆಡಳಿತಾತಕ ಮತ್ತು ರಾಜಕೀಯ ತಂತ್ರಗಾರಿಕೆಯನ್ನು ಎತ್ತಿ ತೋರಿಸುತ್ತದೆ.
ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿ :
2025 ಜುಲೈ 25ರಂದೇ ಮೋದಿ ಅವರು ಇಂದಿರಾ ಗಾಂಧಿಯವರ ಸುದೀರ್ಘ ಅವಧಿಯ (4,077 ದಿನಗಳು) ದಾಖಲೆಯನ್ನು ಹಿಂದಿಕ್ಕಿ, ದೇಶದ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಜವಾಹರಲಾಲ್ ನೆಹರು ಅವರು ಸತತವಾಗಿ ಸುಮಾರು 17 ವರ್ಷಗಳ ಕಾಲ (1947 ರಿಂದ 1964) ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಸತತವಾಗಿ ಮೂರನೇ ಬಾರಿಗೆ ಅಧಿಕಾರವನ್ನು ಮುಂದುವರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯು ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಮುಖ ತಿರುವು ಎಂದು ಪರಿಗಣಿಸಲ್ಪಟ್ಟಿದೆ.
ಶ್ಲಾಘನೆ: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿರುವ ನರೇಂದ್ರ ಮೋದಿ ಅವರ ಆಡಳಿತ ಹಾಗೂ ಜಾಗತಿಕ ನಾಯಕತ್ವವನ್ನು ದೇಶದ ಪ್ರಮುಖ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮೋದಿ ಅವರ ಸಾಧನೆಯ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ವಿಶೇಷ ಲೇಖನಗಳನ್ನು ಬರೆಯುವ ಮೂಲಕ ಗೌರವ ಸಲ್ಲಿಸಿದ್ದಾರೆ.
ನರೇಂದ್ರ ಮೋದಿಯವರು ಕೇವಲ ಅಧಿಕಾರ ರಾಜಕಾರಣದ ಕಾರಣಕ್ಕಾಗಿ ಇಷ್ಟು ಯಶಸ್ವಿಯಾಗಿಲ್ಲ, ಬದಲಿಗೆ ಅವರಲ್ಲಿರುವ ಕಲಿಯುವ ಮತ್ತು ಬದಲಾಗುವ ವಿಶಿಷ್ಟ ಗುಣ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದು ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬಣ್ಣಿಸಿದ್ದಾರೆ.
ಯಾವುದೇ ರಾಜಕೀಯ ಸವಾಲುಗಳಿದ್ದರೂ ರಾಷ್ಟ್ರದ ಭದ್ರತೆ, ಗಡಿ ರಕ್ಷಣೆ ಮತ್ತು ಕಡೇಯ ಸಾಲಿನಲ್ಲಿರುವ ಬಡವರ ಕಲ್ಯಾಣಕ್ಕೆ ಮೋದಿ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಮುಕ್ತವಾಗಿ ಶ್ಲಾಘಿಸಿರುವ ಗೌಡರು, ಈ ಅಪ್ರತಿಮ ಸಾಧನೆಯು ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಹಾಗೂ ನವ ಭಾರತದ ವಿಕಾಸಕ್ಕೆ ಸಾಕ್ಷಿಯಾಗಿದೆ ಎಂದು ಜಾಗತಿಕ ರಂಗದಲ್ಲಿ ವಿಶ್ಲೇಷಿಸಲಾಗುತ್ತಿದೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ಎಂದೂ ಕೂಡ ತಾವು ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಭಾರತದ ಜಾಗತಿಕ ಬೆಳವಣಿಗೆಗೆ ಮೋದಿ ದಿಕ್ಸೂಚಿ :
ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥರಾದ ಎನ್. ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿ ಅವರ ಆಡಳಿತ ಶೈಲಿ ಮತ್ತು ದೇಶದ ಮೇಲಿನ ಅದರ ಪ್ರಭಾವವನ್ನು ತಮ ಲೇಖನದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ದೂರದೃಷ್ಟಿಯ ನಾಯಕತ್ವ: ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಿರ್ಧಾರಗಳು ಮತ್ತು ಸುಧಾರಣೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಾಗೂ ತಾಂತ್ರಿಕ ಶಕ್ತಿಯನ್ನಾಗಿ ರೂಪಿಸಿವೆ. ರಾಷ್ಟ್ರ ಮೊದಲು ಎಂಬ ಪ್ರಧಾನಿ ಮೋದಿಯವರ ಪ್ರಿನ್ಸಿಪಲ್ ತಮಗೆ ತುಂಬಾ ಇಷ್ಟ. ಅಷ್ಟೇ ಅಲ್ಲದೆ ಜನ್ಧನ್ ಯೋಜನೆ, ಯುಪಿಐ, ಆಧಾರ್ ಹೀಗೆ ಹಲವು ನಿರ್ಧಾರಗಳ ಕುರಿತು ಬರೆದಿದ್ದಾರೆ.
