ನವದೆಹಲಿ, ಜೂನ್ 11-ಎಂಟಿ ಸೆಟ್ಟೆಬೆಲ್ಲೊ ವಾಣಿಜ್ಯ ಹಡಗಿನ ಮೇಲೆ ದಾಳಿ ವೇಳೆ ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದು ದೃಢಪಟ್ಟಿದೆ.
ನಾಪತ್ತೆಯಾಗಿದ್ದ ನಾವಿಕರ ಮೃತದೇಹಗಳನ್ನು ಪತ್ತೆಹಚ್ಚಿ ಗುರುತಿಸಲಾಗಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.
ಪಲಾವ್ ಧ್ವಜದ ಎಂಟಿ ಸೆಟ್ಟೆಬೆಲ್ಲೊ ಹಡಗಿನಲ್ಲಿ ನಡೆದ ದುರಂತದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದು ಇದೀಗ ದೃಢಪಟ್ಟಿದೆ ಎಂದು ಸೋನೋವಾಲ್ ತಿಳಿಸಿದ್ದಾರೆ.
ಈ ಕಠಿಣ ಸಂದರ್ಭದಲ್ಲಿ ಮೃತರ ಕುಟುಂಬಗಳ ಜೊತೆ ಮೋದಿ ಸರ್ಕಾರ ದೃಢವಾಗಿ ನಿಂತಿದ್ದು, ಅವರ ಆಪ್ತರಿಗೆ ಅಗತ್ಯ ನೆರವು ನೀಡಲು ಸಂಪೂರ್ಣ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ತಕ್ಷಣ ಭಾರತಕ್ಕೆ ಕರೆತರಲು ಹಾಗೂ ಮೃತ ನಾವಿಕರ ಪಾರ್ಥಿವ ಶರೀರಗಳನ್ನು ಅಂತ್ಯಸಂಸ್ಕಾರಕ್ಕಾಗಿ ಶೀಘ್ರದಲ್ಲೇ ಸ್ವದೇಶಕ್ಕೆ ತರಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಸೋನೋವಾಲ್ ಹೇಳಿದ್ದಾರೆ.
ಅಮೆರಿಕದ ವಿರುದ್ಧ ಭಾರತದ ತೀವ್ರ ಪ್ರತಿಭಟನೆ:
ಒಮಾನ್ ಕರಾವಳಿ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ಅಮೆರಿಕದ ಸೇನಾ ದಾಳಿಯಲ್ಲಿ 24 ಭಾರತೀಯ ಸಿಬ್ಬಂದಿಯ ಪೈಕಿ ಮೂವರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಭಾರತ ಬುಧವಾರ ಅಮೆರಿಕದ ರಾಜತಾಂತ್ರಿಕ ಪ್ರತಿನಿಧಿಯನ್ನು ಕರೆಸಿ ತೀವ್ರ ಪ್ರತಿಭಟನೆ ದಾಖಲಿಸಿತ್ತು.
ಎರಡು ದಿನಗಳ ಹಿಂದಷ್ಟೇ ದಾಳಿ:
ಇರಾನ್ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧ ಹೇರಿದೆ. ಈ ನಡುವೆ ತೈಲ ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ 24 ಭಾರತೀಯ ಸಿಬ್ಬಂದಿಯಿದ್ದ ಪಲಾವ್ ಧ್ವಜದ ಸೆಟ್ಟೆಬೆಲ್ಲೊ ಹಡಗಿನ ಮೇಲೆ ಅಮೆರಿಕ ನೌಕಾಪಡೆಯು ದಾಳಿ ನಡೆಸಿತ್ತು ಎಂದು ವರದಿಯಾಗಿತ್ತು.
ಅಮೆರಿಕದ ಸೆಂಟ್ರಲ್ ಕಮಾಂಡ್ ಕೂಡ ಹಡಗಿನ ಮೇಲಿನ ದಾಳಿಯನ್ನು ಒಪ್ಪಿಕೊಂಡಿದ್ದು, ಇರಾನ್‌ನಿಂದ ತೈಲ ಸಾಗಿಸಲು ಯತ್ನಿಸುವ ಮೂಲಕ ಹಡಗು ಅಮೆರಿಕ ಹೇರಿದ್ದ ನಿರ್ಬಂಧವನ್ನು ಉಲ್ಲಂಘಿಸಿದೆ ಎಂದು ಹೇಳಿಕೆ ನೀಡಿತ್ತು.ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಭಾರತೀಯ ನಾವಿಕರ ಸುರಕ್ಷತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
