ಬೆಂಗಳೂರು,ಜೂ.11-ನಗರದಲ್ಲಿ ಇತ್ತೀಚೆಗೆ ತಣ್ಣಗಾಗಿದ್ದ ಪೊಲೀಸರ ಪಿಸ್ತೂಲ್ ಇಂದು ಮತ್ತೆ ಸದ್ದು ಮಾಡಿದೆ. ದರೋಡೆಕೋರನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದ್ದಿದ್ದಾನೆ.
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿ ಆಶ್ರಯ ಲೇಔಟ್ ನಿವಾಸಿ ಜೀವಾ (20) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಮೂಲತಃ ತಮಿಳುನಾಡಿನವನು.ಕಳೆದ ವಾರ ಜೀವಾ ತನ್ನ ಸಹಚರರೊಂದಿಗೆ ಸೇರಿಕೊಂಡು ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬೋಡಿ ಠಾಣೆ ಪೊಲೀಸರು ಆರೋಪಿ ಜೀವಾನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆತ ತಮಿಳುನಾಡಿನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಅಲ್ಲಿಗೆ ಒಂದು ತಂಡ ತೆರೆಳಿತ್ತು.ಪೊಲೀಸರು ತಮಿಳುನಾಡಿಗೆ ಬಂದು ತನ್ನನ್ನು ಬಂಧಿಸುತ್ತಾರೆಂದು ತಿಳಿದು ಆರೋಪಿ ಜೀವಾ ವಾಪಸ್ ನಗರಕ್ಕೆ ಬಂದು ಸಿಂಗೇನಾಅಗ್ರಹಾರ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಬೆಳೆದಿರುವ ನೀಲಗಿರಿ ತೋಪಿನಲ್ಲಿ ರಾತ್ರಿ ಅಡಗಿ ಕುಳಿತಿದ್ದನು.
ಆತನನ್ನು ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಹೆಬ್ಬಗೋಡಿ ಠಾಣೆ ಸಬ್‌ಇನ್‌್ಸಪೆಕ್ಟರ್ ಅಯ್ಯಪ್ಪ ಹಾಗೂ ಕಾನ್‌ಸ್ಟೇಬಲ್ ನಾಗೇಶ್ ಹಾಗೂ ಇತರರೊಂದಿಗೆ ಇಂದು ಬೆಳಗಿನ ಜಾವ 1.30ರ ಸುಮಾರಿಗೆ ಸಿಂಗೇನಾಅಗ್ರಹಾರ ತೋಪಿನ ಬಳಿ ಹೋಗಿದ್ದಾರೆ.
ಪೊಲೀಸರನ್ನು ಗಮನಿಸಿದ ದರೋಡೆಕೋರ ಜೀವಾ ಏಕಾಏಕಿ ಚಾಕುವಿನಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ತಕ್ಷಣ ಸಬ್‌ಇನ್‌್ಸಪೆಕ್ಟರ್ ಅಯ್ಯಪ್ಪ ಅವರು ತಮ ಸರ್ವಿಸ್ ಪಿಸ್ತೂಲ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಚಾಕುವಿನಿಂದ ಕಾನ್ಸ್ ಸ್ಟೇಬಲ್ ನಾಗೇಶ್ ಅವರ ಮೇಲೆ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಸಬ್‌ಇನ್ಸ್ ಪೆಕ್ಟರ್ ಆರಿಸಿದ ಗುಂಡು ದರೋಡೆಕೋರನ ಬಲಗಾಲಿಗೆ ತಗುಲಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಕಾನ್ಸ್ ಸ್ಟೇಬಲ್ ನಾಗೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ,ದರೋಡೆ ಸೇರಿದಂತೆ ನಾಲ್ಕು ಪ್ರಕರಣಗಳು, ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಅಪಹರಣ, ದರೋಡೆ ಪ್ರಕರಣ ಮತ್ತು ತಮಿಳುನಾಡಿನ ವೆಟಮೆಲಮ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿವೆ. ಆರೋಪಿ ಅಪ್ರಾಪ್ತನಾಗಿರುವುದರಿಂದ ರೌಡಿ ಶೀಟರ್ ಹಾಕಿರಲಿಲ್ಲ. ಇದೀಗ ಆತನ ಮೇಲೆ ರೌಡಿ ಪಟ್ಟಿ ತೆರೆಯಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.
