ಬೆಂಗಳೂರು, ಜೂ.11- ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ನಾಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಮುಖ್ಯಮಂತ್ರಿಯಾದ ನಂತರ ಅವರ ಮೊದಲ ಅಧಿಕೃತ ಭೇಟಿ ಇದಾಗಿದೆ. ಜೆ. ಜಯಲಲಿತಾ ಅವರ ನಂತರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ತಮಿಳುನಾಡಿನ ಎರಡನೇ ಮುಖ್ಯಮಂತ್ರಿ ಇವರಾಗಿದ್ದಾರೆ.
ಈ ಭೇಟಿಯ ಹಿನ್ನೆಲೆ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ನಾಳೆ ಮಧ್ಯಾಹ್ನ 12.30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕೊಲ್ಲೂರು ತಲುಪಲಿದ್ದಾರೆ.
ದೇವಾಲಯಕ್ಕೆ ಆಗಮನ :
ಮಧ್ಯಾಹ್ನ ಸುಮಾರು 3 ಗಂಟೆಗೆ ದೇವಸ್ಥಾನಕ್ಕೆ ತಲುಪಿ, ದೇವಿಯ ದರ್ಶನ ಪಡೆದು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಸಿಎಂ ವಿಜಯ್ ಅವರಿಗೆ ಝಡ್ ಪ್ಲಸ್ (+) ಭದ್ರತೆ ಇರುವುದರಿಂದ, ಮಂಗಳೂರು ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗಳು ಬಿಗಿ ಬಂದೋಬಸ್ತ್ ಏರ್ಪಡಿಸಿವೆ. ತಮಿಳುನಾಡು ಸಿಐಡಿ ಭದ್ರತಾ ವಿಭಾಗದ ಮನವಿಯ ಮೇರೆಗೆ, ಅವರ ಸಂಚಾರದ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ.
ಜೋಸೆಫ್ ವಿಜಯ್ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು, ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ. ದೇವಿಗೆ ಅರ್ಚನೆ, ಅಭಿಷೇಕ ಮತ್ತು ಕುಂಕುಮಾರ್ಚನೆ ನಡೆಸಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ಕಳೆಯುವ ನಿರೀಕ್ಷೆಯಿದೆ. ದೇವಿ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ಮುಗಿದ ಬಳಿಕ, ಸಿಎಂ ವಿಜಯ್ ಅವರು ಮಂಗಳೂರಿಗೆ ತೆರಳಿ ಅಲ್ಲಿನ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ. ಅವರ ಈ ಕ್ಷಣಿಕ ಭೇಟಿಯಿಂದಾಗಿ ದೇವಸ್ಥಾನದ ಆವರಣದಲ್ಲಿ ಹೆಚ್ಚಿನ ಗಣ್ಯರು ಮತ್ತು ಅಭಿಮಾನಿಗಳು ಸೇರುವ ಸಾಧ್ಯತೆಯಿದೆ.
