Homeರಾಜ್ಯಮಲ್ಲಿಕಾರ್ಜುನ ಖರ್ಗೆ ಅವರ ದುಂಬಾಲು ಬಿದ್ದ ಸಚಿವಾಕಾಂಕ್ಷಿಗಳು

ಮಲ್ಲಿಕಾರ್ಜುನ ಖರ್ಗೆ ಅವರ ದುಂಬಾಲು ಬಿದ್ದ ಸಚಿವಾಕಾಂಕ್ಷಿಗಳು

Mallikarjun Kharge

ಬೆಂಗಳೂರು, ಜೂ. 12- ಸಚಿವ ಸ್ಥಾನದ ಆಕಾಂಕ್ಷಿಗಳು ಇಂದು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ, ಹಂಪನಗೌಡ ಬಾದರ್ಲಿ, ಮಾಜಿ ಸಚಿವ ಮಾಂಕಾಳ ವೈದ್ಯ ಸೇರಿದಂತೆ ಹಲವಾರು ಮಂದಿ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಇಂದು ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದರು. ರಾಜ್ಯಸಭೆಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅವರು, ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಇಂದು ಖರ್ಗೆ ಅವರನ್ನು ಭೇಟಿ ಮಾಡಿದ ಬಹಳಷ್ಟು ಶಾಸಕರು ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಒತ್ತಡ ಹಾಕಿದ್ದಾರೆ.

ಆರ್‌.ವಿ.ದೇಶಪಾಂಡೆ ತಾವು ಅತ್ಯಂತ ಹಿರಿಯ ಶಾಸಕರಾಗಿದ್ದು, ಬಹುತೇಕ ಇದು ನನ್ನ ಕೊನೆಯ ಚುನಾವಣೆ. ಹಲವಾರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಳೆದ ಮೂರು ವರ್ಷಗಳಿಂದ ತಮನ್ನು ಹೊರಗಿಡಲಾಗಿದೆ. ಸಂಪುಟದಲ್ಲಿ ಬ್ರಾಹಣ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ತಮಗೆ ಅವಕಾಶ ಕೊಡಿಸುವಂತೆ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮಾಂಕಾಳ ವೈದ್ಯ ಅವರು ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ, ಮೇಲಾಗಿ ತಾವು ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಡಿ.ಕೆ.ಶಿವಕುಮಾರ್‌ ಅವರ ಸಂಪುಟದಲ್ಲೂ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಖರ್ಗೆ ಅವರ ಭೇಟಿಯ ವೇಳೆ ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಸಂಪುಟದಲ್ಲಿ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ.

ಈ ಮೊದಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಹುತೇಕರು ಸಚಿವ ಸ್ಥಾನ ಹಾಗೂ ಯಾವುದೇ ಅವಕಾಶಗಳಿಗಾದರೂ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡುತ್ತಿದ್ದ ರೂಢಿ ಸಂಪ್ರದಾಯವಿತ್ತು. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದ ಬಳಿಕ ಶಾಸಕರ ಹಾಜರಾತಿ ಕಡಿಮೆಯಾಗಿದೆ. ಡಿ.ಕೆ.ಶಿವಕುಮಾರ್‌ ಅವರ ಭೇಟಿ ಸುಲಭಸಾಧ್ಯವಿಲ್ಲ ಎಂಬ ಪರಿಸ್ಥಿತಿಯಿದ್ದು, ಎಲ್ಲರೂ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನು ಹತ್ತಲಾರಂಭಿಸಿದ್ದಾರೆ.

RELATED ARTICLES

Latest News