ವಾಷಿಂಗ್ಟನ್,ಜೂ.15- ಸುಮಾರು 107 ದಿನಗಳ ಕಾಲ ನಡೆದ ಅಮೆರಿಕ-ಇರಾನ್ ಯುದ್ಧಕ್ಕೆ ತೆರೆ ಎಳೆಯುವ ಶಾಂತಿ ಒಪ್ಪಂದ ಅಂತಿಮಗೊಂಡಿದ್ದು, ಜಾಗತಿಕ ತೈಲ ಪೂರೈಕೆಯ ಸಮುದ್ರಮಾರ್ಗವಾದ ಹಾರ್ಮುಜ್ ಜಲಸಂಧಿ ಶುಕ್ರವಾರದಿಂದ ಮತ್ತೆ ತೆರೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ.
ಸ್ವಿಟ್ಜರ್ಲೆಂಡ್‌ನಲ್ಲಿ ಜೂನ್ 19ರಂದು ನಡೆಯಲಿರುವ ಅಧಿಕೃತ ಸಹಿ ಸಮಾರಂಭದ ಬಳಿಕ ಜಲಸಂಧಿ ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಟ್ರಂಪ್ ಭಾನುವಾರ ತಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಈ ಘೋಷಣೆ ಮಾಡಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಮೇಲಿದ್ದ ಒತ್ತಡವನ್ನು ತಗ್ಗಿಸಿದೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು, ಎಂದು ಟ್ರಂಪ್ ಹೇಳಿದ್ದಾರೆ.ಅಮೆರಿಕ ನೌಕಾಪಡೆಯು ಇರಾನ್ ಬಂದರುಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸುವುದಾಗಿ ಅವರು ಘೋಷಿಸಿದರು.
ಹೋರ್ಮುಜ್ ಜಲಸಂಧಿಯನ್ನು ಯಾವುದೇ ಶುಲ್ಕವಿಲ್ಲದೆ ತೆರೆಯಲು ನಾನು ಸಂಪೂರ್ಣ ಅನುಮತಿ ನೀಡುತ್ತಿದ್ದೇನೆ. ಜೊತೆಗೆ ಅಮೆರಿಕದ ನೌಕಾ ನಿರ್ಬಂಧವನ್ನು ತಕ್ಷಣದಿಂದಲೇ ಹಿಂತೆಗೆದುಕೊಳ್ಳಲು ಆದೇಶಿಸುತ್ತಿದ್ದೇನೆ. ವಿಶ್ವದ ಹಡಗುಗಳೇ, ನಿಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲಿ! ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಆದರೆ ನಂತರದ ಮತ್ತೊಂದು ಪೋಸ್ಟ್‌ನಲ್ಲಿ, ಒಪ್ಪಂದಕ್ಕೆ ಅಧಿಕೃತ ಸಹಿ ಹಾಕಿದ ಬಳಿಕವೇ ಶುಕ್ರವಾರ ಹೋರ್ಮುಜ್ ಜಲಸಂಧಿ ತೆರೆಯಲಿದೆಎಂದು ಅವರು ಸ್ಪಷ್ಟಪಡಿಸಿದರು.
80ನೇ ಜನದಿನದಂದೇ ಶಾಂತಿ ಘೋಷಣೆ
ಟ್ರಂಪ್ ಅವರ 80ನೇ ಜನ್ಮದಿನದಂದೇ ಈ ಒಪ್ಪಂದ ಅಂತಿಮಗೊಂಡಿರುವುದು ವಿಶೇಷವಾಗಿದೆ. ಕಳೆದ ವಾರವಿಡೀ ಯುದ್ಧ ಮತ್ತು ರಾಜತಾಂತ್ರಿಕ ಬೆಳವಣಿಗೆಗಳು ತೀವ್ರಗೊಂಡಿದ್ದವು.
ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ್ದರೆ, ಕೊನೆಯ ಕ್ಷಣದಲ್ಲಿ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲಿನ ನಿಯಂತ್ರಣದ ಬೆದರಿಕೆಯಿಂದ ಟ್ರಂಪ್ ಹಿಂದೆ ಸರಿದಿದ್ದರು.
ಈ ಮಹತ್ವದ ಒಪ್ಪಂದ ಇಡೀ ಪ್ರದೇಶಕ್ಕೆ ಶಾಂತಿ ಮತ್ತು ಭದ್ರತೆಯನ್ನು ತರಲಿದೆ. ಇರಾನ್ ಜೊತೆ ಶಾಂತಿ ಸಾಧಿಸಲು ಅನೇಕ ಅಧ್ಯಕ್ಷರು ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ ನಾನು ಯಶಸ್ವಿಯಾಗಿದ್ದೇನೆ, ಎಂದು ಟ್ರಂಪ್ ಹೇಳಿದ್ದಾರೆ.
ಈ ಪ್ರದೇಶದ ನಾಯಕರು ಮೊದಲ ಬಾರಿಗೆ ನಿಜವಾದ ಶಾಂತಿ ಸಾಧಿಸಲು ನೆರವಾಗಬಲ್ಲ ಅಧ್ಯಕ್ಷರನ್ನು ಕಂಡಿದ್ದಾರೆ. ಶುಕ್ರವಾರ ಒಪ್ಪಂದಕ್ಕೆ ಸಹಿಯಾದ ಬಳಿಕ, ಸಮುದ್ರದಲ್ಲಿ ಅಳವಡಿಸಿರುವ ಮೈನ್‌ಗಳನ್ನು ತೆರವುಗೊಳಿಸುವ ಉದ್ದೇಶದಿಂದ ಜಲಸಂಧಿ ತೆರೆಯಲಿದೆ. ಇದರಿಂದ ಮತ್ತೆ ಈ ಪ್ರದೇಶಕ್ಕೂ, ವಿಶ್ವಕ್ಕೂ ತೈಲ ಪೂರೈಕೆ ಆರಂಭವಾಗಲಿದೆ, ಎಂದು ಅವರು ಹೇಳಿದ್ದಾರೆ.
ಇಸ್ರೇಲ್-ಲೆಬನಾನ್ ಉದ್ವಿಗ್ನತೆ
ಒಪ್ಪಂದ ಅಂತಿಮಗೊಳ್ಳುವ ಕೆಲವೇ ಗಂಟೆಗಳ ಮೊದಲು, ಲೆಬನಾನ್‌ನ ಬೈರೂತ್‌ನಲ್ಲಿ ಹೆಜ್ಬೊಲ್ಲಾ ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವಾಯುದಾಳಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು.ಈ ಹಿನ್ನೆಲೆಯಲ್ಲಿ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಅಲ್ಲದೆ, ಹೊಸದಾಗಿ ದಾಳಿಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ನೆತನ್ಯಾಹು ಹಾಗೂ ಇರಾನ್ ಸಂಧಾನಕಾರರಿಗೆ ಸೂಚಿಸಿದ್ದಾಗಿ ಅಮೆರಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ, ಮುಂದಿನ 60 ದಿನಗಳ ಅವಧಿಯಲ್ಲಿ ಅಮೆರಿಕ ಮತ್ತು ಇರಾನ್, ಇರಾನ್‌ನ ಅಣು ಶುದ್ಧೀಕರಣ ಕಾರ್ಯಕ್ರಮ ಹಾಗೂ ಅಧಿಕ ಪ್ರಮಾಣದಲ್ಲಿ ಶುದ್ಧೀಕರಿಸಿದ ಯುರೇನಿಯಂ ಸಂಗ್ರಹದ ವಿಲೇವಾರಿ ಕುರಿತು ಮಾತುಕತೆ ನಡೆಸಲಿವೆ.
ಈ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ನೇತೃತ್ವದ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಿದ್ದವು.ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಇರಾನ್ ತನ್ನ ಹಲವು ಉನ್ನತ ನಾಯಕರನ್ನು ಕಳೆದುಕೊಂಡಿತ್ತು.
ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲರಿಜಾನಿಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್‌್ಸನ ಕಮಾಂಡರ್ ಮೊಹಮ್ಮದ್ ಪಕ್ಪೂರ್,ರಕ್ಷಣಾ ಸಚಿವ ಅಜೀಜ್ ನಸಿರ್ಜಾದೆಹ್ ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ ಪ್ರಸ್ತುತ ಖಮೇನಿಯವರ ಪುತ್ರ ಮೊಜ್ತಬಾ ಖಮೇನಿ ಇರಾನ್‌ನ ಪರಮೋಚ್ಚ ನಾಯಕರಾಗಿದ್ದಾರೆ. ಆದರೆ ಯುದ್ಧ ಆರಂಭವಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
