ನ್ಯೂಯಾರ್ಕ್,ಜೂ.15- ಅಮೆರಿಕ -ಇರಾನ್ ಯುದ್ಧ ಅಂತ್ಯಗೊಳಿಸುವ ಹಾಗೂ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಕುರಿತು ಘೋಷಿಸಲಾದ ಒಪ್ಪಂದದ ಹೊರತಾಗಿಯೂ, ಕಚ್ಚಾ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆಗಳು,ಇಂಧನ ಬೆಲೆ ಏರಿಕೆಯು ತಕ್ಷಣವೇ ಪರಿಹಾರವಾಗುವುದಿಲ್ಲ ಎಂದು ಇಂಧನ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಬೇಡಿಕೆಗೆ ತಕ್ಕಂತೆ ತೈಲ ಪೂರೈಕೆ ಪುನರಾರಂಭವಾ ಗಲು ಮತ್ತು ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪನೆಗೊಳ್ಳಲು ಹಲವು ತಿಂಗಳುಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಕಚ್ಚಾ ತೈಲ ಸಾಗಣೆ ಮತ್ತು ಸಂಸ್ಕರಣೆಯ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುವುದು, ಜೊತೆಗೆ ಹೋರ್ಮುಜ್ ಜಲಸಂಧಿಯ ಮೂಲಕ ಸಾಗಾಟ ನಡೆಸುವ ಭದ್ರತೆ ಕುರಿತು ಇನ್ನೂ ಅನುಮಾನಗಳು ಉಳಿದಿರುವುದರಿಂದ ಇದರ ಪರಿಣಾಮ ತಕ್ಷಣ ಗೋಚರಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಮೂರು ತಿಂಗಳಿನಿಂದ ಸಿಲುಕಿದ್ದ ತೈಲ ಹಡಗುಗಳು: ಯುದ್ಧ ಆರಂಭಕ್ಕೂ ಮುನ್ನ ಜಾಗತಿಕ ತೈಲ ಮತ್ತು ಪೆಟ್ರೋಲ್ ಪೂರೈಕೆಯ ಸುಮಾರು ಐದನೇ ಒಂದು ಭಾಗ ಹೋರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲ ಈ ಜಲಮಾರ್ಗ ಸುರಕ್ಷಿತವಾಗಿರದ ಕಾರಣ, ಕಚ್ಚಾ ತೈಲ ತುಂಬಿದ ಅನೇಕ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲೇ ಸಿಲುಕಿಕೊಂಡಿದ್ದವು.
ಎಸ್‌ಪಿ ಗ್ಲೋಬಲ್ ಎನರ್ಜಿ ಸಂಸ್ಥೆಯ ಇಂಧನ ಮತ್ತು ಸಂಸ್ಕರಣಾ ಸಂಶೋಧನಾ ವಿಭಾಗದ ಜಾಗತಿಕ ಮುಖ್ಯಸ್ಥ ಡೇನಿಯಲ್ ಇವಾನ್ಸ್ ಮಾತನಾಡಿ, ಜನರಲ್ಲಿ ವಿಶ್ವಾಸ ಮೂಡಲು ಮತ್ತು ವಿಮಾ ವ್ಯವಸ್ಥೆಗಳು ಮರುಸ್ಥಾಪನೆಯಾಗಲು ಸಮಯ ಬೇಕಾಗುತ್ತದೆ. ವಿಶೇಷವಾಗಿ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಲು ನೆಲಮಟ್ಟದಲ್ಲಿ ಜನರನ್ನು ಕಾರ್ಯಪ್ರವೃತ್ತಗೊಳಿಸಲು ಸಮಯ ಹಿಡಿಯುತ್ತದೆ, ಎಂದಿದ್ದಾರೆ.
ಒಪ್ಪಂದದ ಘೋಷಣೆಯ ಬೆನ್ನಲ್ಲೇ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 3.45 ಡಾಲರ್ ಇಳಿದು 83.89 ಡಾಲರ್‌ಗೆ ತಲುಪಿತು. ಅಮೆರಿಕದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲದ ಬೆಲೆ 4.03 ಡಾಲರ್ ಕುಸಿದು ಪ್ರತಿ ಬ್ಯಾರೆಲ್‌ಗೆ 80.85 ಡಾಲರ್‌ಗೆ ಇಳಿಯಿತು. ಆದಾಗ್ಯೂ, ಯುದ್ಧ ಆರಂಭಕ್ಕೂ ಮುನ್ನ ಕಚ್ಚಾ ತೈಲದ ಬೆಲೆ ಸುಮಾರು ಸುಮಾರು 70 ಡಾಲರ್ ಪ್ರತಿ ಬ್ಯಾರೆಲ್ ಏರಿತ್ತು ಹೀಗಾಗಿ ಈಗಿನ ದರಗಳು ಇನ್ನೂ ಹೆಚ್ಚಾಗಿಯೇ ಇವೆ.
ಇವಾನ್‌್ಸಅವರ ಪ್ರಕಾರ, ಮೊದಲು ಸಿಲುಕಿದ್ದ ಹಡಗುಗಳು ಜಲಸಂಧಿಯಿಂದ ಹೊರಬರಬೇಕು. ಬಳಿಕ ಹೊಸ ಟ್ಯಾಂಕರ್‌ಗಳು ಒಳಬಂದು ತೈಲ ತುಂಬಿಕೊಂಡು ಹೊರಡಬೇಕು. ಹಡಗನ್ನು ಒಳಗೆ ತರಲು, ಅದನ್ನು ಸುರಕ್ಷಿತವಾಗಿ ಒಳಗೆ ತಂದು, ತೈಲ ತುಂಬಿಸಿ ಹೊರಗೆ ಕಳುಹಿಸಲು ಸಾಕಷ್ಟು ಸುರಕ್ಷಿತ ಅವಧಿ ಇದೆ ಎಂಬ ವಿಶ್ವಾಸ ಇರಬೇಕು, ಎಂದು ಅವರು ಹೇಳಿದ್ದಾರೆ. ತೈಲ ಟ್ಯಾಂಕರ್‌ಗಳ ಸಂಚಾರವೂ ನಿಧಾನಗತಿಯಲ್ಲಿ ನಡೆಯುವುದರಿಂದ, ಹೋರ್ಮುಜ್‌ನಿಂದ ದೂರದ ದೇಶಗಳಿಗೆ ತಲುಪಿ, ಅಲ್ಲಿ ಸಂಸ್ಕರಣಾ ಘಟಕಗಳಲ್ಲಿ ತೈಲವನ್ನು ಸಂಸ್ಕರಿಸಿ ಅಂತಿಮ ಗಮ್ಯಸ್ಥಾನಕ್ಕೆ ತಲುಪಲು ಹಲವು ತಿಂಗಳುಗಳು ಬೇಕಾಗುತ್ತವೆ.
ಮಧ್ಯಪ್ರಾಚ್ಯದ ಕೆಲವು ತೈಲ ಉತ್ಪಾದಕ ರಾಷ್ಟ್ರಗಳು ಸಂಗ್ರಹ ಸಾಮರ್ಥ್ಯ ಕೊರತೆಯಿಂದಾಗಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಇಂತಹ ಉತ್ಪಾದನೆಯನ್ನು ಮತ್ತೆ ಆರಂಭಿಸುವುದು ಕೂಡ ಸುಲಭದ ಕೆಲಸವಲ್ಲ ಎಂದು ತಜ್ಞರು ಹೇಳಿದ್ದಾರೆ.
ವುಡ್ ಮಕೆಂಜಿಸಂಸ್ಥೆಯ ತೈಲ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಅಲನ್ ಗೆಲ್ಡರ್ ಅವರ ಪ್ರಕಾರ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಹೋರ್ಮುಜ್ ಜಲಸಂಧಿಗೆ ಪರ್ಯಾಯ ಪೈಪ್‌ಲೈನ್ ಮತ್ತು ಮಾರ್ಗಗಳನ್ನು ಹೊಂದಿರುವುದರಿಂದ ಬೇಗನೆ ಉತ್ಪಾದನೆ ಪುನರಾರಂಭಿಸುವ ಸಾಧ್ಯತೆ ಇದೆ.ಆದರೆ ಇರಾಕ್ ನಂತಹ ದೇಶಗಳು ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗಬಹುದು.
ಇರಾಕ್‌ನಲ್ಲಿ ಉತ್ಪಾದನೆ ಸ್ಥಗಿತ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ತೈಲ ಕ್ಷೇತ್ರಗಳ ಪರಿಸ್ಥಿತಿ ಸಂಕೀರ್ಣವಾಗಿದೆ. ಅವರು ಪೂರ್ಣ ಪ್ರಮಾಣದ ಉತ್ಪಾದನೆಗೆ ಮರಳಲು ಸುಮಾರು ಒಂದು ವರ್ಷವೂ ಬೇಕಾಗಬಹುದು, ಎಂದು ಗೆಲ್ಡರ್ ಹೇಳಿದ್ದಾರೆ.
ಹೋರ್ಮುಜ್ ಜಲಸಂಧಿ ಮುಚ್ಚಿದ ನಂತರ ಇಂಧನ ಕ್ಷೇತ್ರದಲ್ಲಿನ ಹೊಸ ಹೂಡಿಕೆಗಳು ಸ್ಥಗಿತಗೊಂಡಿದ್ದವು. ಈ ಹೂಡಿಕೆಗಳು ಮತ್ತೆ ಚೇತರಿಸಿಕೊಳ್ಳಲು ಮತ್ತು ಅದರ ಫಲಿತಾಂಶ ಕಾಣಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಗೆಲ್ಡರ್ ಅಭಿಪ್ರಾಯಪಟ್ಟಿದ್ದಾರೆ.
