Homeರಾಜ್ಯಕರ್ನಾಟಕದ ಮತದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಲಾಭ : ಸಿಎಂ ಡಿಕೆಶಿ

ಕರ್ನಾಟಕದ ಮತದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಲಾಭ : ಸಿಎಂ ಡಿಕೆಶಿ

Benefit of guarantee schemes only for Karnataka voters: CM DK

ಬೆಂಗಳೂರು, ಜೂ. 15- ಕರ್ನಾಟಕದ ಮತದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ತಲುಪಬೇಕು. ಅನರ್ಹರಿಂದ ಸೌಲಭ್ಯ ದುರುಪಯೋಗವಾಗುವುದನ್ನು ತಪ್ಪಿಸಲು ಪರಿಷ್ಕರಣೆ ಮಾಡಲಾಗುತ್ತಿದೆಯೇ ಹೊರತು, ಯಾವ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಒಳ್ಳೆಯದನ್ನು ಮಾಡಲು ಬಿಡುವುದಿಲ್ಲ, ನಾವಿರುವುದೇ ಟೀಕೆ ಮಾಡಲು ಎಂಬಂತೆ ನಡೆದುಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆದರೆ ಅನರ್ಹರಿಗೆ ಸೌಲಭ್ಯ ತಲುಪುವುದನ್ನು ತಪ್ಪಿಸಲು ಪರಿಷ್ಕರಣೆ ಆರಂಭಿಸಿದೆ ಎಂದು ಹೇಳಿದರು.
ಈ ಮೊದಲು ಯೋಜನೆ ಅನುಷ್ಠಾನಗೊಂಡಾಗ ತರಾತುರಿಯಲ್ಲಿ ಬೇರೆ ಯಾರದ್ದೋ ಫೋನ್‌ ನಂಬರ್‌ಗಳನ್ನು ಫಲಾನುಭವಿಗಳು ಕೊಟ್ಟಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ 2 ಸಾವಿರ ರೂ.ಗಳನ್ನು ಬೇರೆ ಯಾರೋ ಡ್ರಾ ಮಾಡುತ್ತಿರುವುದಕ್ಕೆ ನಮ ಬಳಿ ದಾಖಲೆಗಳಿವೆ. ಇನ್ನು ಮುಂದೆ ಅರ್ಹರಿಗೆ ಯೋಜನೆ ತಲುಪಬೇಕು. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾವಣೆಯಾಗಬೇಕು. ಅದಕ್ಕಾಗಿ ಕ್ರಮ ಬದ್ಧಗೊಳಿಸಲು ಪ್ರಕ್ರಿಯೆ ನಡೆಸುತ್ತಿದ್ದೇವೆ ಎಂದರು. ಯೋಜನೆ ರೂಪಿಸಿರುವುದು ಕರ್ನಾಟಕದ ಮತದಾರರಿಗೆ ಮಾತ್ರ. ಹೊರ ರಾಜ್ಯದವರಿಗಲ್ಲ, ರಾಜ್ಯದ ಮತದಾರರಲ್ಲದವರಿಗೆ ಸೌಲಭ್ಯಗಳನ್ನು ಏಕೆ? ಕೊಡಬೇಕು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಶಕ್ತಿ ಯೋಜನೆಯ ಫಲಾನುಭವಿಗಳಿಗೂ ಗುರುತಿನ ಚೀಟಿ ನೀಡಲು ಕಳೆದ 3 ತಿಂಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಕರ್ನಾಟಕದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಚುನಾವಣೆಯ ಸಂದರ್ಭದಲ್ಲಿ ನಮ ಗ್ಯಾರಂಟಿಗಳನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ಅನುಸರಿಸಿವೆ. ಬೆಲೆಗಳು ಗಗನಕ್ಕೇರಿ ಆದಾಯ ಪಾತಾಳಕ್ಕಿಳಿದ ಸಂದರ್ಭದಲ್ಲಿ ಗ್ಯಾರಂಟಿಗಳು ಜನರಿಗೆ ನೆರವಾಗುತ್ತಿವೆ. ಅದರೆ ಅವುಗಳು ಅರ್ಹರಿಗೆ ತಲುಪಬೇಕು ಎಂದು ಹೇಳಿದರು.

ಗೃಹ ಲಕ್ಷ್ಮಿಯ ಹಣವನ್ನು ಕೆಲವರು ನಕಲಿ ಸ್ಕೀಮ್‌ಗಳಲ್ಲಿ ತೊಡಗಿಸಿ ಕಳೆದುಕೊಳ್ಳುತ್ತಿದ್ದಾರೆ. ದಾವಣಗೆರೆ, ಬೆಳಗಾವಿಗಳಲ್ಲಿ ಇಂತಹ ಹಗರಣಗಳು ಬೆಳಕಿಗೆ ಬಂದಿವೆ. ಶೇ.36, 40ರಷ್ಟು ಬಡ್ಡಿ ನೀಡುತ್ತೇವೆ ಎಂದು ಆಮಿಷವೊಡ್ಡುವ ನಕಲಿ ಸ್ಕೀಮ್‌ಗಳಿಗೆ ಕಡಿವಾಣ ಹಾಕಬೇಕಿದೆ. ವಿನಿವಿಂಕ್‌, ಐಎಂಎ ನಂತಹ ವಂಚನೆಗಳು ಮರುಕಳಿಸಬಾರದು. ಗ್ರಾಮಪಂಚಾಯಿತಿ ಮಟ್ಟದಿಂದಲೂ ಇವುಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಿದ್ದೇನೆ ಎಂದರು.

ಹೆಣ್ಣು ಕುಟುಂಬದ ಕಣ್ಣು. ಅವರ ಆರ್ಥಿಕ ಸಬಲೀಕರಣ ನಮ ಸರ್ಕಾರದ ಗುರಿ. ಯಾವ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಿದರು.ಬಿಡದಿ ಬಳಿಯ ಟೌನ್‌ಶಿಪ್‌ ಮಾಡಿದ್ದು ನಾನಲ್ಲ. ಹಿಂದೆ ಎಚ್‌.ಡಿ.ಕುಮಾರಸ್ವಾಮಿಯವರೇ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರು. ತೆಲಂಗಾಣದಲ್ಲಿ 80 ಸಾವಿರ ಎಕರೆಯನ್ನು ಸ್ವಾಧೀನ ಪಡಿಸಿಕೊಂಡು 40 ಸಾವಿರ ಎಕರೆಯಲ್ಲಿ ಹೊಸ ನಗರ ನಿರ್ಮಿಸಿದ್ದಾರೆ.

ಬಿಡದಿ ಬಳಿ ಬಿಜೆಪಿ ಸರ್ಕಾರ ಒಂದು ಸಾವಿರ ಎಕರೆಯನ್ನು ಸ್ವಾಧೀನ ಪಡೆದುಕೊಂಡು, ನಂತರ ಕೆಐಎಡಿಬಿಎಗೆ ನೀಡಿದೆ. ಬಿಡದಿ, ಹಾರೋಹಳ್ಳಿ ಬಳಿ ಉಪನಗರ ನಿರ್ಮಿಸಿದ್ದು, ಯಾರು ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಪ್ರಶ್ನಿಸಿದರು.ಉಪನಗರ ಯೋಜನೆಗೆ ರೈತರು ಒಪ್ಪಿಕೊಂಡಿದ್ದಾರೆ. ಅದನ್ನು ಜಾರಿಗೊಳಿಸುತ್ತೇವೆ. ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಅವರು ಅದನ್ನು ಮುಂದುವರೆಸಲಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

RELATED ARTICLES

Latest News