Homeರಾಜ್ಯಜಮೀರ್‌ ಅಹಮದ್‌ ಖಾನ್‌ಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಬಲಿಗರಿಂದ ವಿಧಾನಸೌಧ ಚಲೋ

ಜಮೀರ್‌ ಅಹಮದ್‌ ಖಾನ್‌ಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಬಲಿಗರಿಂದ ವಿಧಾನಸೌಧ ಚಲೋ

Supporters stage Vidhana Soudha Chalo demanding that Zameer Ahmed Khan DCM Post

ಬೆಂಗಳೂರು, ಜೂ. 15- ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಿ ಬೆಂಬಲಿಗರು ಇಂದು ವಿಧಾನಸೌಧ ಚಲೋ ನಡೆಸಿದ್ದಾರೆ. ಮಾಜಿ ಕಾರ್ಪೊರೇಟರ್‌ಗಳು ಹಾಗೂ ಕೆಲ ಮುಖಂಡರು ಜಮೀರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಉಪ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿ ಪಾದರಾಯನಪುರದಿಂದ ವಿಧಾನಸೌಧದ ವರೆಗೂ ಪ್ರತಿಭಟನೆಯ ಜಾಥಾ ನಡೆಸಿದ್ದಾರೆ.

ಮೊದಲ ಹಂತದ ಸಂಪುಟದ ರಚನೆಯಲ್ಲಿ ಜಮೀರ್‌ ಅವರಿಗೆ ಅವಕಾಶ ಸಿಕ್ಕಿಲ್ಲ, ಈ ವಿಚಾರವಾಗಿ ಹಿರಿಯ ನಾಯಕರನ್ನು ಭೇಟಿ ಮಾಡಿ ಜಮೀರ್‌ ಅವರು ತಮ ಅಹವಾಲು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಜಮೀರ್‌ ಅವರ ಬೆಂಬಲಿಗರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವುದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮೊದಲು ಸಚಿವರಾಗಿದ್ದ ಶಿವರಾಜ ತಂಗಡಗಿ ಅವರನ್ನು ನೂತನ ಸರ್ಕಾರದಲ್ಲಿ ಸಂಪುಟದಿಂದ ಹೊರ ಇಡಲಾಗಿದೆ. ಅವರ ಬೆಂಬಲಿಗರು ಪ್ರತಿಭಟಿಸಲು ಮುಂದಾದಾಗ ಶಿವರಾಜ ತಂಗಡಗಿ ಸಮಾಧಾನ ಪಡಿಸಿದ್ದು, ಪ್ರತಿಭಟನೆ ಮಾಡಬೇಡಿ, ಪೂಜೆ, ಪ್ರಾರ್ಥನೆಗಳ ಮೂಲಕ ಹೈಕಮಾಂಡ್‌ ಮನ ಸೆಳೆಯುವ ಮೂಲಕ ಪ್ರಯತ್ನಮಾಡಿ ಎಂದು ಸಲಹೆ ನೀಡಿದ್ದರು. ಇದೇ ರೀತಿ ಹಲವು ಸಚಿವರು ತಮ ಬೆಂಬಲಿಗರನ್ನು ನಿಯಂತ್ರಿಸಿ ಕಾಂಗ್ರೆಸ್‌‍ ವಿರುದ್ಧ ಪ್ರತಿಭಟನೆ ಮಾಡದಂತೆ ತಡೆದಿದ್ದಾರೆ. ಆದರೆ ಜಮೀರ್‌ ಅವರ ಬೆಂಬಲಿಗರು ಯಾವುದಕ್ಕೂ ಜಗ್ಗದೇ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಮೊದಲು ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ, ಕಾಂಗ್ರೆಸ್‌‍ ಪಕ್ಷ ಆಗಿನ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌ ಅವರನ್ನು ಅಧಿಕಾರದಿಂದ ವಜಾಗೊಳಿಸಿತ್ತು. ಕಾಂಗ್ರೆಸ್‌‍ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್‌ ಜಬ್ಬಾರ್‌ ತಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು.

ಈ ವೇಳೆ ಮುಸ್ಲಿಂ ಸಮುದಾಯದ ಮೌಲಿಗಳು ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‌‍ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಪಕ್ಷದ ವಿರುದ್ಧ ಹೇಳಿಕೆಗಳು ಕೇಳಿ ಬರುತ್ತಿದ್ದರೂ ಕೂಡ ಜಮೀರ್‌ ಅಹಮದ್‌ ಖಾನ್‌ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದರು. ಈ ಎಲ್ಲದರ ನಂತರ ಆಡಿಯೋವೊಂದು ವೈರಲ್‌ ಆಗಿತ್ತು. ಅದರಲ್ಲಿ ಜಮೀರ್‌ ಅಹಮದ್‌ ಖಾನ್‌ ಕಾಂಗ್ರೆಸ್‌‍ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡುವಂತೆ ತಮ ಸಮುದಾಯದ ಮುಖಂಡರಿಗೆ ಸಂದೇಶ ನೀಡಿರುವುದಾಗಿ ತಿಳಿದು ಬಂದಿದೆ.

ಈ ಆಡಿಯೋ ಜಮೀರ್‌ ಅವರನ್ನು ಅಧಿಕಾರದಿಂದ ದೂರ ಇಡುವಂತೆ ಮಾಡಿದೆ. ಹಲವು ಬಾರಿ ಶಿಸ್ತಿನ ಪಾಠ ಮಾಡಿದ್ದರೂ ಬೆಲೆ ನೀಡದ ಜಮೀರ್‌, ಈಗ ಸಂಪುಟದ ಸಚಿವ ಸ್ಥಾನಕ್ಕಾಗಿ ನಾನಾ ರೀತಿಯ ಸರ್ಕಸ್‌‍ ಮಾಡುತ್ತಿದ್ದಾರೆ.

RELATED ARTICLES

Latest News