Homeರಾಜ್ಯ3ನೇ ಆಷಾಢ ಶುಕ್ರವಾರ : ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ದೇವಿ

3ನೇ ಆಷಾಢ ಶುಕ್ರವಾರ : ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ದೇವಿ

ಮೈಸೂರು,ಜೂ.31- ಆಷಾಢ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ಇಂದು ನಗರ ದೇವತೆ ಚಾಮುಂಡೇಶ್ವರಿ ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಸಮೂಹವೇ ಹರಿದುಬಂದಿತ್ತು. ಬ್ರಾಹಿ ಮುಹೂರ್ತದಲ್ಲಿ ಪೂಜೆ ಸಲ್ಲಿಸಲು ಹಾಗೂ ದೇವಿ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಸ್ತೆ ಹಾಗೂ ಮೆಟ್ಟಿಲು ಮಾರ್ಗವಾಗಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ಇಡೀ ದೇವಸ್ಥಾನದ ಒಳಾಂಗಣವನ್ನು ಕಮಲ, ಚೆಂಡು ಹೂ, ಸೇವಂತಿಗೆ, ಕನಕಾಂಬರ ಸೇರಿದಂತೆ ಐದು ಬಗೆಯ ಹೂಗಳು, ಕಿತ್ತಲೆ, ಮಾವು, ವಿವಿಧ ಬಗೆಯ ಹಣ್ಣುಗಳಿಂದ ಅಲಂಕರಿಸಲಾಗಿತ್ತು.

ಮುಂಜಾನೆ 3.30ಕ್ಕೆ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ಕೈಯಲ್ಲಿ ಕಮಲದ ಹೂ, ಅರಿಶಿನದ ತಟ್ಟೆ ಹಿಡಿದು ಪ್ರತಿಯೊಬ್ಬರೂ ದೇವರ ದರ್ಶನಕ್ಕೆ ಕಾತುರದಿಂದ ಕಾಯುತ್ತಿದ್ದ ದೃಶ್ಯಗಳು ಕಂಡುಬಂದವು.ಬೆಳಗಿನ ಜಾವದಿಂದಲೇ ದೇವಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ಅರ್ಚಕರ ವೇದಘೋಷಗಳು, ಮಂತ್ರಘೋಷಗಳು ಮಾರ್ಧನಿಸಿದವು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರ ಗಣ್ಯರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡಿತ್ತು.ಲಲಿತಮಹಲ್‌ ಮೈದಾನದಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗಾಗಿ ಉಚಿತ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕಾಗಿ ವಿಐಪಿ ಶಿಫಾರಸ್ಸು ವಾಹನಗಳು ಹಾಗೂ ಸಾರ್ವಜನಿಕರ ಖಾಸಗಿ ವಾಹನಗಳಿಗೆ ಬೆಟ್ಟದ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ವೃದ್ಧರು, ಮಹಿಳೆಯರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌‍ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಕುಡಿಯುವ ನೀರು, ವೈದ್ಯಕೀಯ ತಂಡ ಹಾಗೂ ಪೊಲೀಸರು ಬೆಟ್ಟದಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಳ್ಳುವುದಿರುವುದು ಸಾಧ್ಯವೇ? ವರ್ಷಕ್ಕೊಮೆ ಬಂದರೂ ಇಂದಿನ ದರ್ಶನದ ಅನುಭವವೇ ಬೇರೆ ಎಂದು ದೇವಿಯ ದರ್ಶನ ಪಡೆದು ಹೊರಬಂದ ಭಕ್ತರೊಬ್ಬರು ಭಾವುಕರಾಗಿ ನುಡಿದರು.

RELATED ARTICLES

Latest News