Homeರಾಜ್ಯಕಾವೇರಿ ಕಿಚ್ಚು : ಕೆಆರ್‌ಎಸ್‌‍ ಬಳಿ ಭಾರಿ ಪ್ರತಿಭಟನೆ, ಪೊಲೀಸರು ಫುಲ್ ಅಲರ್ಟ್

ಕಾವೇರಿ ಕಿಚ್ಚು : ಕೆಆರ್‌ಎಸ್‌‍ ಬಳಿ ಭಾರಿ ಪ್ರತಿಭಟನೆ, ಪೊಲೀಸರು ಫುಲ್ ಅಲರ್ಟ್

ಮಂಡ್ಯ, ಜು. 31 (ಪಿಟಿಐ)- ಕಾವೇರಿ ಕಿಚ್ಚು ತೀವ್ರಗೊಂಡಿದ್ದು, ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ನೀಡಿರುವ ನಿರ್ದೇಶನವನ್ನು ವಿರೋಧಿಸಿ ರಾಜ್ಯದ ರೈತ ಸಮುದಾಯ ಮತ್ತು ಕನ್ನಡ ಪರ ಸಂಘಟನೆಗಳು ಇಂದು ಕೆಆರ್‌ಎಸ್‌‍ ಜಲಾಶಯದ ಬಳಿ ಸಾಂಕೇತಿಕವಾಗಿ ಹುಲ್ಲು ತಿನ್ನುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

15 ದಿನಗಳವರೆಗೆ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್‌ ನೀರು ಬಿಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಸಿಡಬ್ಲ್ಯೂಎಂಎ ಎತ್ತಿಹಿಡಿದಿದೆ.ಮಾನ್ಸೂನ್‌ನಲ್ಲಿ ಈ ಪ್ರದೇಶದಲ್ಲಿ ಕಡಿಮೆ ಮಳೆ ಮತ್ತು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತೀವ್ರ ಬರ ಪರಿಸ್ಥಿತಿಯ ಕರ್ನಾಟಕದ ವಾದವನ್ನು ಸಿಡಬ್ಲ್ಯೂಎಂಎ ಪರಿಗಣಿಸಲಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆ.2 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

ಕನ್ನಡ ರಕ್ಷಣಾ ವೇದಿಕೆಯ ಸದಸ್ಯರು ಸೇರಿದಂತೆ ಪ್ರತಿಭಟನಾಕಾರರು ಜಲಾಶಯದ ಬಳಿ ಜಮಾಯಿಸಿದರು, ಕೆಲವು ಮಹಿಳಾ ಪ್ರತಿಭಟನಾಕಾರರು ಸಿಡಬ್ಲ್ಯೂಎಂಎ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಆದೇಶಗಳಿಗೆ ತಮ ವಿರೋಧವನ್ನು ವ್ಯಕ್ತಪಡಿಸಲು ಸಾಂಕೇತಿಕವಾಗಿ ಹುಲ್ಲು ತಿನ್ನುತ್ತಿದ್ದರು.

ಪ್ರತಿಭಟನೆಯ ಸಂಕೇತವಾಗಿ ಮಹಿಳೆಯರು ಸೇರಿದಂತೆ ಕೆಲವು ಪ್ರತಿಭಟನಾಕಾರರು ರಸ್ತೆಯಲ್ಲಿ ಉರುಳಾಡುತ್ತಿರುವುದು ಕಂಡುಬಂದಿತು. ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್‌ ವಿಜಯ್‌ ಅವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಸಹ ಅವರು ಹಿಡಿದಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಹಲವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದರು.

ಪ್ರಾಧಿಕಾರವು ನಮ ರೈತರಿಗೆ ಮರಣದಂಡನೆ ಶಿಕ್ಷೆಗೆ ಸಹಿ ಹಾಕಿದೆ. ಯಾವುದೇ ಸಂದರ್ಭದಲ್ಲೂ ಇದನ್ನು ಒಪ್ಪಿಕೊಳ್ಳಬಾರದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕವು ಅನ್ಯಾಯಕ್ಕೆ ಪದೇ ಪದೇ ಒಳಗಾಗುತ್ತಿದೆ. ಸಂಕಷ್ಟ ಸಂದರ್ಭದಲ್ಲಿ ನಮಗೆ ಯಾವಾಗಲೂ ನ್ಯಾಯ ಸಿಗುತ್ತಿಲ್ಲ. ಹೋರಾಟ ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ದೃಢವಾದ ನಿಲುವು ತೆಗೆದುಕೊಳ್ಳುವಂತೆ ಮನವಿ ಮಾಡಿದ ಪ್ರತಿಭಟನಾಕಾರರು, ಇಡೀ ಕನ್ನಡ ಸಮುದಾಯವು ನಿಮೊಂದಿಗೆ ನಿಂತಿದೆ. ನೀವು ಸರ್ವಪಕ್ಷ ಸಭೆ ಕರೆದಿದ್ದೀರಿ. ಜಾತಿ ಮತ್ತು ಧರ್ಮವನ್ನು ಮರೆತು ಎಲ್ಲಾ ಪಕ್ಷಗಳ ನಾಯಕರು ನಿಮೊಂದಿಗೆ ನಿಲ್ಲುತ್ತಾರೆ ಎಂದರು.

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ನೀರು ಬಿಡದಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಕರ್ನಾಟಕದಿಂದ ನೀರು ಕೇಳುವ ಮೊದಲು ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕೆಂದು ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರಿಗೆ ಮನವಿ ಮಾಡಿದರು. ಬಲವಾದ ಕಾನೂನು ಹೋರಾಟ ಮಾಡಬೇಕು. ಸುಪ್ರೀಂ ಕೋರ್ಟ್‌ ಮುಂದೆ ಸೂಕ್ತ ಪ್ರಕರಣವನ್ನು ಮಂಡಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಿಎಸ್‌‍ವೈ :
ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತಿತರ ಬಿಜೆಪಿ ಮುಖಂಡರು ಭೇಟಿ ನೀಡುತ್ತಿರುವುದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಭಾರೀ ಭದ್ರತೆ :
ಪ್ರತಿಭಟನೆಗಳ ನಿರೀಕ್ಷೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮಂಡ್ಯ ಪೊಲೀಸ್‌‍ ವರಿಷ್ಠಾಧಿಕಾರಿ ಶೋಭಾ ರಾಣಿ ವಿ.ಜೆ. ತಿಳಿಸಿದ್ದಾರೆ.
ಇಬ್ಬರು ಎಸ್‌‍ಪಿಗಳು, ಒಬ್ಬ ಹೆಚ್ಚುವರಿ ಎಸ್‌‍ಪಿ, ಒಂಬತ್ತು ಡಿವೈಎಸ್‌‍ಪಿಗಳು, 28 ಸರ್ಕಲ್‌ ಇನ್‌ಸ್ಪೆಕ್ಟರ್‌ಗಳು, 46 ಪಿಎಸ್‌‍ಐಗಳು ಮತ್ತು 59 ಎಎಸ್‌‍ಐಗಳನ್ನು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌‍ (ಕೆಎಸ್‌‍ಆರ್‌ಪಿ) ಯ 10 ಕಂಪನಿಗಳು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ನ ಎಂಟು ಘಟಕಗಳನ್ನು ನಿಯೋಜಿಸಿದ್ದೇವೆ. ಒಟ್ಟಾರೆಯಾಗಿ, ಸುಮಾರು 1,500 ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ ಎಂದು ಅವರು ಹೇಳಿದರು. ಇತರ ಜಿಲ್ಲೆಗಳ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ, ಸೂಕ್ಷ್ಮ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ ಮತ್ತು ಬೃಂದಾವನ ಉದ್ಯಾನವನಕ್ಕೆ ಸಾರ್ವಜನಿಕ ಪ್ರವೇಶವನ್ನು ದಿನಕ್ಕೆ ನಿಷೇಧಿಸಲಾಗಿದೆ ಎಂದು ಎಸ್‌‍ಪಿ ಹೇಳಿದರು.

ಜಲಾಶಯಕ್ಕೆ ಮುತ್ತಿಗೆ : ಕೆಆರ್‌ಎಸ್‌‍ನಲ್ಲಿ ಪೊಲೀಸರ ಕಣ್ಗಾವಲು

ಬೆಂಗಳೂರು,ಜು.31- ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ಖಂಡಿಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೆಆರ್‌ಎಸ್‌‍ ಜಲಾಶಯಕ್ಕೆ ಮುತ್ತಿಗೆ ಹಾಕುವ ಹಿನ್ನಲೆಯಲ್ಲಿ ಅಧಿಕಾರಿಗಳು ಸೇರಿದಂತೆ 1,500 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಜಲಾಶಯದ ಬಳಿ ಮೊಕ್ಕಂ ಹೂಡಿದ ಅವರು, ಈ ಸಂಜೆಯೊಂದಿಗೆ ಮಾತನಾಡುತ್ತಾ, ಒಬ್ಬರು ಐಜಿಪಿ, ಮೂವರು ಎಸ್ಪಿಗಳು, ಹತ್ತು ಡಿವೈಎಸ್‌‍ಪಿಗಳು, 30 ಇನ್ಸ್ ಪೆಕ್ಟರ್‌ಗಳು, 50ಕ್ಕೂ ಹೆಚ್ಚು ಸಬ್‌ಇನ್ಸ್ ಪೆಕ್ಟರ್‌ಗಳು ಕರ್ತವ್ಯದಲ್ಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಪೊಲೀಸರ ಜೊತೆಗೆ ಕೆ.ಎಸ್‌‍.ಆರ್‌.ಪಿ ಮತ್ತು ಡಿ.ಎ.ಆರ್‌ನ 10 ತುಕುಡಿಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಜಲಾಶಯದ ಬಳಿ ಬ್ಯಾರಿಕೇಡ್‌ ಹಾಕಿ ಯಾರನ್ನು ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಶ್ರೀರಂಗಪಟ್ಟಣ ಮತ್ತು ಮಂಡ್ಯ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಸಹ ಬಿಗಿಯಾದ ಪೊಲೀಸ್‌‍ ಬಂದೋಬಸ್ತ್‌ ಮಾಡಿದ್ದೇವೆ ಎಂದು ಅವರು ತಿಳಿಸಿದರು.

RELATED ARTICLES

Latest News