Homeರಾಜ್ಯಕರ್ನಾಟಕ ಬಿಜೆಪಿಗೆ ಪ್ರಹ್ಲಾದ್‌ಜೋಶಿ ಸಾರಥಿ..?

ಕರ್ನಾಟಕ ಬಿಜೆಪಿಗೆ ಪ್ರಹ್ಲಾದ್‌ಜೋಶಿ ಸಾರಥಿ..?

ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷದ ಆಂತರಿಕ ಸಮೀಕರಣಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಹೆಸರು ಬಿಜೆಪಿಯ ಸಾರಥ್ಯಕ್ಕೆ ಮತ್ತೆ ಮುನ್ನಲೆಗೆ ಬಂದಿದೆ.

ಬೆಂಗಳೂರು, ಜೂ.16- ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷದ ಆಂತರಿಕ ಸಮೀಕರಣಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಹೆಸರು ಬಿಜೆಪಿಯ ಸಾರಥ್ಯಕ್ಕೆ ಮತ್ತೆ ಮುನ್ನಲೆಗೆ ಬಂದಿದೆ.

ಕರ್ನಾಟಕದಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾದ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ರಾಜ್ಯದಲ್ಲೂ ಮಹತ್ವದ ಸಾಂಸ್ಥಿಕ ಪುನರ್‌ ರಚನೆಗೆ ಸಿದ್ಧತೆ ನಡೆಸುತ್ತಿದೆ. ವಿರೋಧ ಪಕ್ಷದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವುದರ ಜೊತೆಗೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ.

ಕರ್ನಾಟಕ ಬಿಜೆಪಿ ಮುಖ್ಯಸ್ಥ ಹುದ್ದೆಗೆ ಸಂಭಾವ್ಯಅಭ್ಯರ್ಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಹಲವಾರು ನಾಯಕರ ಹೆಸರುಗಳು ಕೇಳಿಬರುತ್ತಿದ್ದು ಮುಂದಿನ ಕೆಲವು ದಿನಗಳಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ನಾಯಕತ್ವವು ತನ್ನ ಕರ್ನಾಟಕ ಘಟಕವನ್ನು ಪುನರ್‌ರಚಿಸುವತ್ತ ಗಮನಹರಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಸೂಚಿಸಿವೆ.

ಇತ್ತೀಚೆಗೆ ನಾಲ್ಕು ರಾಜ್ಯಗಳಿಗೆ ಬಿಜೆಪಿಯ ವರಿಷ್ಠರು ನೂತನ ಅಧ್ಯಕ್ಷರನ್ನು ನೇಮಿಸಿದ್ದರು. ಆದರೆ, ಕರ್ನಾಟಕದ ಅಧ್ಯಕ್ಷರ ಘೋಷಣೆಯನ್ನು ಹಾಗೆಯೇ ಬಾಕಿ ಇಟ್ಟಿತ್ತು. ಈಗ, ಜೂನ್‌ ಮಧ್ಯ ಭಾಗದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್‌ ಸರ್ಜರಿಯಾಗಲಿದೆ ಎನ್ನುವ ಸುದ್ದಿ, ಈಗಾಗಲೇ ಹರಿದಾಡುತ್ತಿದೆ. ಇದರ ಜೊತೆಗೆ, ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರು ಬರಲಿದ್ದಾರೆ ಎನ್ನುವ ಸುದ್ದಿಗೆ ರೆಕ್ಕೆಪುಕ್ಕ ಹುಟ್ಟಿಕೊಳ್ಳುತ್ತಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್‌ ಸರ್ಜರಿಯಾಗಲಿದೆ. ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸುಮಾರು ಹತ್ತರಿಂದ ಹನ್ನೆರಡು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ಜೊತೆಗೆ, ಹಾಲೀ ಸಚಿವರ ಖಾತೆಯನ್ನು ಬದಲಾಯಿಸುವ ಸಾಧ್ಯತೆಯಿದೆ.

ಇದರ ಜೊತೆಗೆ, ಕರ್ನಾಟಕದಲ್ಲೂ ಬಹುಕಾಲದಿಂದ ನೆನೆಗುದಿಗೆ ಇರುವ ರಾಜ್ಯಾಧ್ಯಕ್ಷರ ಹುದ್ದೆಗೂ ಹೊಸ ಹೆಸರನ್ನು ಘೋಷಿಸುವ ಸಾಧ್ಯತೆಯ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದೆ. ಕನಿಷ್ಠ ಇಬ್ಬರು ಸಂಪುಟ ದರ್ಜೆಯ ಸಚಿವರ ಜೊತೆಗೆ ಮೂರು ಅದಕ್ಕಿಂತ ಹೆಚ್ಚು ರಾಜ್ಯ ಸಚಿವರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸಂಪುಟದಿಂದ ಹೊರ ನಡೆಯುವ ಸಚಿವರುಗಳಿಗೆ, ರಾಜ್ಯದ ಜವಾಬ್ದಾರಿಯನ್ನು ನೀಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.

ಇದರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರುಗಳನ್ನು ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ, ದೆಹಲಿ ವಲಯದಲ್ಲಿ ಹರಿದಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ವರಿಷ್ಠರು ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶ, ಚುನಾವಣೆಗಳ ಮುನ್ನಾ ದಿನದ ಸಿದ್ಧತೆ ಮತ್ತು ವಿವಿಧ ಸಮುದಾಯಗಳ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪಕ್ಷದ ಪ್ರಚಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಮುನ್ನಡೆಸ ಬಲ್ಲ ಮತ್ತು ರಾಜ್ಯಾದ್ಯಂತ ಬಲವಾದ ಜನಸಾಮಾನ್ಯ ಜಾಲವನ್ನು ನಿರ್ಮಿಸಬಲ್ಲ ಹೊಸ ರಾಜ್ಯ ಅಧ್ಯಕ್ಷರ ನೇಮಕವು ಪರಿಗಣನೆಯಲ್ಲಿರುವ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ.

ಜೋಶಿ ಆಯ್ಕೆ ಏಕೆ? :
ಬಿಜೆಪಿ ಹೈಕಮಾಂಡ್‌ ಸಾಮಾನ್ಯವಾಗಿ ರಾಜ್ಯ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯ ಮತ್ತು ಜಾತಿ ಸಮೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯದ ಪ್ರಭಾವದ ನಡುವೆ, ಜೋಶಿ ಅವರಂತಹ ನಾಯಕರು ಪಕ್ಷದ ಅಜೆಂಡಾವನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಮತ್ತು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಸಮತೋಲನ ಸಾಧಿಸಬಲ್ಲರು ಎಂದು ವರಿಷ್ಠರು ಭಾವಿಸುವ ಸಾಧ್ಯತೆಯಿದೆ.

ಪ್ರಹ್ಲಾದ್‌ ಜೋಶಿ ಅವರು ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಮತ್ತು ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ಕೇಂದ್ರ ಸಚಿವರಾಗಿ ಅವರ ಅನುಭವ, ಸಂಸದೀಯ ವ್ಯವಹಾರಗಳ ನಿರ್ವಹಣೆಯಲ್ಲಿನ ಪಾಂಡಿತ್ಯ ಮತ್ತು ರಾಷ್ಟ್ರೀಯ ನಾಯಕತ್ವದೊಂದಿಗೆ ಅವರಿಗಿರುವ ನಿಕಟ ಬಾಂಧವ್ಯವು ಅವರನ್ನು ರಾಜ್ಯ ರಾಜಕೀಯದ ಪ್ರಮುಖ ಆಕಾಂಕ್ಷಿಯನ್ನಾಗಿ ಮಾಡುತ್ತದೆ. ಈಗಾಗಲೇ 2014 ರಿಂದ 2016ರ ಅವಧಿಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಆ ಅವಧಿಯಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಅವರು ವಹಿಸಿದ್ದ ಪಾತ್ರ ಮತ್ತು ರಾಜ್ಯದಾದ್ಯಂತ ಅವರಿಗಿರುವ ಹಿಡಿತವು ಹೈಕಮಾಂಡ್‌‍ನ ಗಮನ ಸೆಳೆಯುವಂತಿದೆ. ಪಕ್ಷದ ಸಂಘಟನಾತಕ ಚೌಕಟ್ಟನ್ನು ಬಲ್ಲವರಾಗಿರುವುದರಿಂದ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಲು ಅವರು ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದೆ.

ಬ್ರಾಹಣ ಸಮುದಾಯದ ಮುಖವಾಗಿ ಅವರು ರಾಷ್ಟ್ರೀಯ ಮಟ್ಟದ ಇಮೇಜ್‌ ಹೊಂದಿದ್ದು, ಇದು ಪಕ್ಷದ ಬಲವನ್ನು ವೃದ್ಧಿಸುತ್ತದೆ ಎಂಬುದು ಒಂದು ವಾದ. ಬಿಜೆಪಿಯಲ್ಲಿ ಅಧ್ಯಕ್ಷರ ಬದಲಾವಣೆ ಅಥವಾ ನೇಮಕಾತಿಗಳು ಕೇವಲ ವೈಯಕ್ತಿಕ ಇಚ್ಛೆಯಲ್ಲ, ಬದಲಾಗಿ ರಾಷ್ಟ್ರೀಯ ನಾಯಕತ್ವದ ದೂರಗಾಮಿ ಚಿಂತನೆಯ ಭಾಗವಾಗಿರುತ್ತದೆ.

ಪ್ರಹ್ಲಾದ್‌ ಜೋಶಿ ಅವರ ಹೆಸರು ಮುಂಚೂಣಿಯಲ್ಲಿರುವುದು, ಅವರು ಕೇಂದ್ರದಲ್ಲಿ ಪ್ರಭಾವಿಯಾಗಿ ರುವುದರಿಂದ ರಾಜ್ಯದ ಆಡಳಿತಾರೂಢ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಮತ್ತು ಕೇಂದ್ರದ ನೆರವನ್ನು ರಾಜ್ಯಕ್ಕೆ ತರಲು ಸಹಕಾರಿಯಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

RELATED ARTICLES

Latest News