ಮೈಸೂರು,ಆ.1- ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.ರಾಮಕೃಷ್ಣ ಆಶ್ರಮದಲ್ಲಿರುವ ವಿವೇಕ ಸಾರಕವನ್ನು ಮೋದಿಯವರು ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ತಲುಪಿ ಅಲ್ಲಿಂದ ಸೇನಾ ಚಾಪರ್ ಮೂಲಕ ಓವಲ್ ಮೈದಾನಕ್ಕೆ ಬರಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ರಾಮಕೃಷ್ಣ ಆಶ್ರಮದ ರಸ್ತೆಯುದ್ದಕ್ಕೂ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.ವಿವೇಕ ಸಾರಕದ ಬಳಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ವಿಐಪಿ, ವಿವಿಐಪಿ ಹಾಗೂ ಶಾಸಕರು, ಸಚಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಕಾಣಿಕೆ :
ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಿ ದೇಶದ ಗಮನ ಸೆಳೆದಿರುವ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಸ್ವಾಮಿ ವಿವೇಕಾನಂದರ ಏಕಶಿಲಾ ಬಿಳಿ ಮಾರ್ಬಲ್ ಮೂರ್ತಿಯನ್ನು ಪ್ರಧಾನಿಯವರಿಗೆ ವಿಶೇಷ ಕಾಣಿಕೆಯಾಗಿ ನೀಡಲಾಗುತ್ತಿದೆ.
ಈ ಸುಂದರ ಶಿಲ್ಪವನ್ನು ರಾಮಕೃಷ್ಣ ಆಶ್ರಮದ ವತಿಯಿಂದ ಪ್ರಧಾನಿಯವರಿಗೆ ವಿಶೇಷ ನೆನಪಿನ ಕಾಣಿಕೆಯಾಗಿ ನೀಡಲಾಗುತ್ತಿದ್ದು, ಮೈಸೂರಿನ ಶಿಲ್ಪಕಲೆಯ ವೈಭವವು ಮತ್ತೊಮೆ ದೇಶದ ಮುಂದೆ ಅನಾವರಣಗೊಳ್ಳಲಿದೆ.
