ಸೆ.30ರಿಂದ ಕರ್ನಾಟಕ ಸಿನಿ-ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಕಾಯ್ದೆ ಜಾರಿ ಬೆಂಗಳೂರು,ಸೆ.18- ರಾಜ್ಯದ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರ ಕ್ಷೇಮಾಭಿವೃದ್ಧಿಗಾಗಿ ರೂಪಿಸಲಾಗಿರುವ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ, 2024 ಸೆಪ್ಟೆಂಬರ್ 30, 2026ರಿಂದ ಜಾರಿಗೆ ಬರಲಿದೆ.
ಈ ಸಂಬಂಧ ರಾಜ್ಯ ಸರ್ಕಾರ ಸೆಪ್ಟೆಂಬರ್ 10ರಂದು ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಸಿನಿಮಾ ಟಿಕೆಟ್‌ಗಳು ಸೇರಿದಂತೆ ಅಧಿನಿಯಮದ ವ್ಯಾಪ್ತಿಗೆ ಬರುವ ಆದಾಯದ ಮೇಲೆ ಕನಿಷ್ಠ ಶೇ.1ರಿಂದ ಗರಿಷ್ಠ ಶೇ.2ರವರೆಗೆ ಕ್ಷೇಮಾಭಿವೃದ್ಧಿ ಉಪಕರ (ಸೆಸ್) ವಿಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧದಿಂದ ಹೊರಡಿಸಿರುವ ಅಧಿಸೂಚನೆಯಲ್ಲಿ, 2024ರ ಕರ್ನಾಟಕ ಅಧಿನಿಯಮ ಸಂಖ್ಯೆ 46ರ ಪ್ರಕರಣ 1(2)ರಡಿ ನೀಡಿರುವ ಅಧಿಕಾರವನ್ನು ಚಲಾಯಿಸಿ ಕಾಯ್ದೆಯ ಎಲ್ಲ ಉಪಬಂಧಗಳು 30/09/2026ರಿಂದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ.
ಎರಡು ವರ್ಷಗಳ ಬಳಿಕ ಕಾಯ್ದೆ ಜಾರಿ
ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಕಾರ್ಮಿಕರು ಮತ್ತು ಕಾರ್ಯಕರ್ತರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ 2024ರಲ್ಲಿ ಈ ಸಂಬಂಧ ವಿಧೇಯಕವನ್ನು ಮಂಡಿಸಿತ್ತು. ವಿಧಾನಮಂಡಲದ ಅಂಗೀಕಾರದ ಬಳಿಕ 2024ರ ಸೆಪ್ಟೆಂಬರ್ 23ರಂದು ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಿದ್ದರು. ಮರುದಿನ, ಸೆಪ್ಟೆಂಬರ್ 24ರಂದು ವಿಶೇಷ ರಾಜ್ಯಪತ್ರದಲ್ಲಿ ಕಾಯ್ದೆಯನ್ನು ಪ್ರಕಟಿಸಲಾಗಿತ್ತು.
ಆದರೆ ಕಾಯ್ದೆ ಅಂಗೀಕಾರಗೊಂಡು ಸುಮಾರು ಎರಡು ವರ್ಷಗಳ ಬಳಿಕ ಇದೀಗ ಅದರ ಉಪಬಂಧಗಳನ್ನು ಜಾರಿಗೆ ತರಲು ಸರ್ಕಾರ ದಿನಾಂಕ ನಿಗದಿಪಡಿಸಿದೆ. ಸೆಪ್ಟೆಂಬರ್ 30ರಿಂದ ಕಾಯ್ದೆ ಜಾರಿಗೆ ಬರುವುದರಿಂದ ಇದರಡಿ ಸೆಸ್ ಸಂಗ್ರಹಿಸುವ ವ್ಯವಸ್ಥೆಯೂ ಕಾರ್ಯರೂಪಕ್ಕೆ ಬರಲಿದೆ.
ಶೇ.1ರಿಂದ ಶೇ.2ರವರೆಗೆ ಸೆಸ್
ಅಧಿನಿಯಮದ ಪ್ರಮುಖ ಅಂಶವೆಂದರೆ ಱಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪಕರೞ ಸಂಗ್ರಹ. ಸರ್ಕಾರ ಅಧಿಸೂಚನೆಯ ಮೂಲಕ ನಿಗದಿಪಡಿಸುವ ದರದಲ್ಲಿ ಈ ಉಪಕರವನ್ನು ವಿಧಿಸಬಹುದಾಗಿದೆ.ಕಾಯ್ದೆಯ ಪ್ರಕಾರ, ಸರ್ಕಾರ ಅಧಿಸೂಚಿಸುವ ಸಿನಿಮಾ ಟಿಕೆಟ್‌ಗಳು, ವಂತಿಗೆ ಶುಲ್ಕಗಳು ಹಾಗೂ ಸಂಬಂಧಿತ ಸಂಸ್ಥೆಗಳಿಂದ ಸೃಜಿಸಲ್ಪಡುವ ಆದಾಯದ ಮೇಲೆ ಸೆಸ್ ವಿಧಿಸಲು ಅವಕಾಶವಿದೆ. ಈ ದರ ಶೇ.1ಕ್ಕಿಂತ ಕಡಿಮೆಯಿರಬಾರದು ಮತ್ತು ಶೇ.2ಕ್ಕಿಂತ ಹೆಚ್ಚಿರಬಾರದು ಎಂಬ ಮಿತಿ ನಿಗದಿಪಡಿಸಲಾಗಿದೆ.
ಹೀಗಾಗಿ ಸರ್ಕಾರ ಗರಿಷ್ಠ ದರವಾದ ಶೇ.2ನ್ನು ಅನ್ವಯಿಸಿದಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಸೆಸ್ ಲೆಕ್ಕಕ್ಕೆ ಒಳಪಡುವ ಟಿಕೆಟ್ ಮೊತ್ತ ?200 ಆಗಿದ್ದರೆ, ಶೇ.2ರ ದರದಲ್ಲಿ 4 ಹೆಚ್ಚುವರಿ ಉಪಕರವಾಗುತ್ತದೆ. ಆದರೆ ಅಂತಿಮವಾಗಿ ಯಾವ ದರವನ್ನು ಅನ್ವಯಿಸಲಾಗುತ್ತದೆ ಎಂಬುದು ಸರ್ಕಾರದ ಸಂಬಂಧಿತ ಅಧಿಸೂಚನೆಗೆ ಒಳಪಟ್ಟಿರುತ್ತದೆ.
ಮೂರು ವರ್ಷಕ್ಕೊಮೆ ಟಿಕೆಟ್ ದರ ಪರಿಷ್ಕರಣೆಗೆ
ಕಾಯ್ದೆಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಸಿನಿಮಾ ಟಿಕೆಟ್ ದರವನ್ನು ಮೂರು ವರ್ಷಗಳಿಗೊಮೆ ಅಧಿಸೂಚನೆಯ ಮೂಲಕ ಪರಿಷ್ಕರಿಸಲು ಸರ್ಕಾರಕ್ಕೆ ಅವಕಾಶ ನೀಡಿರುವುದು. ಆದರೆ ಸೆಸ್ ಲೆಕ್ಕಾಚಾರದ ಉದ್ದೇಶಕ್ಕಾಗಿ ಱಸಿನಿಮಾ ಟಿಕೆಟ್ ದರೞದಲ್ಲಿ ಪಾವತಿಸಿದ ಅಥವಾ ಪಾವತಿಸಬೇಕಾದ ಯಾವುದೇ ತೆರಿಗೆಯನ್ನು ಸೇರಿಸಬಾರದು ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಇದರ ಪರಿಣಾಮವಾಗಿ ಸಿನಿಮಾ ಟಿಕೆಟ್ ದರ, ತೆರಿಗೆ ಮತ್ತು ಕ್ಷೇಮಾಭಿವೃದ್ಧಿ ಸೆಸ್ ನಡುವಿನ ಲೆಕ್ಕಾಚಾರ ಪ್ರತ್ಯೇಕವಾಗಿರಲಿದೆ.
ಯಾರ ಕ್ಷೇಮಾಭಿವೃದ್ಧಿಗಾಗಿ?
ಸಿನಿಮಾ ನಿರ್ಮಾಣ, ಪ್ರದರ್ಶನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ವಿವಿಧ ವರ್ಗದ ಕಾರ್ಯಕರ್ತರು ದುಡಿಯುತ್ತಿದ್ದಾರೆ. ನಟ?ನಟಿಯರಿಂದ ಹಿಡಿದು ತಾಂತ್ರಿಕ ಸಿಬ್ಬಂದಿ, ಕಲಾವಿದರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ವಿವಿಧ ಕಾರ್ಯಕರ್ತರ ಕ್ಷೇಮಾಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಈ ಕಾನೂನು ರೂಪಿಸಲಾಗಿದೆ.
ಸೆಸ್ ಮೂಲಕ ಸಂಗ್ರಹವಾಗುವ ಹಣವನ್ನು ಕಾಯ್ದೆಯ ಉದ್ದೇಶಕ್ಕೆ ಅನುಗುಣವಾಗಿ ಬಳಸುವ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಹೀಗಾಗಿ ಕಾಯ್ದೆ ಜಾರಿಯೊಂದಿಗೆ ಸೆಸ್‌ನಿಂದ ಎಷ್ಟು ಆದಾಯ ಸಂಗ್ರಹವಾಗಲಿದೆ, ಅದನ್ನು ಯಾವ ವರ್ಗದ ಕಾರ್ಯಕರ್ತರಿಗೆ ಯಾವ ರೀತಿಯಲ್ಲಿ ತಲುಪಿಸಲಾಗುತ್ತದೆ ಮತ್ತು ಕಲ್ಯಾಣ ಯೋಜನೆಗಳ ಸ್ವರೂಪವೇನು ಎಂಬುದು ಮುಂದಿನ ದಿನಗಳಲ್ಲಿ ಪ್ರಮುಖವಾಗಲಿದೆ.
ಪ್ರೇಕ್ಷಕರಿಗೆ ಹೆಚ್ಚುವರಿ ಹೊರೆ?
ಈಗಾಗಲೇ ಸಿನಿಮಾ ಟಿಕೆಟ್ ದರ, ಜಿಎಸ್‌ಟಿ ಸೇರಿದಂತೆ ವಿವಿಧ ಶುಲ್ಕಗಳ ಬಗ್ಗೆ ಪ್ರೇಕ್ಷಕರಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹೊಸ ಕ್ಷೇಮಾಭಿವೃದ್ಧಿ ಸೆಸ್ ಜಾರಿಗೆ ಬರುತ್ತಿದೆ. ಗರಿಷ್ಠ ಶೇ.2ರ ಸೆಸ್ ಅನ್ನು ವಿಧಿಸಿದರೆ ಅದರ ನೇರ ಪರಿಣಾಮ ಟಿಕೆಟ್ ಖರೀದಿಸುವ ಪ್ರೇಕ್ಷಕರ ಮೇಲೆ ಬೀಳುವ ಸಾಧ್ಯತೆಯಿದೆ.
ಮತ್ತೊಂದೆಡೆ, ಸರ್ಕಾರದ ಉದ್ದೇಶ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಾರ್ಯಕರ್ತರಿಗೆ ಕಲ್ಯಾಣ ವ್ಯವಸ್ಥೆ ಕಲ್ಪಿಸುವುದಾಗಿದೆ. ಹೀಗಾಗಿ ಪ್ರೇಕ್ಷಕರಿಂದ ಸಂಗ್ರಹವಾಗುವ ಹೆಚ್ಚುವರಿ ಮೊತ್ತವು ನಿಜವಾಗಿಯೂ ಕ್ಷೇತ್ರದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆಯೇ ಎಂಬುದು ಕಾಯ್ದೆ ಜಾರಿಯಾದ ಬಳಿಕ ಗಮನ ಸೆಳೆಯುವ ಅಂಶವಾಗಿದೆ.
ಒಟ್ಟಿನಲ್ಲಿ, 2024ರಲ್ಲಿ ಕಾನೂನು ರೂಪ ಪಡೆದುಕೊಂಡಿದ್ದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮಕ್ಕೆ ಎರಡು ವರ್ಷಗಳ ಬಳಿಕ ಜಾರಿಗೆ ದಿನಾಂಕ ನಿಗದಿಯಾಗಿದ್ದು, ಸೆ.30ರಿಂದ ರಾಜ್ಯದ ಸಿನಿಮಾ?ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಸೆಸ್ ವ್ಯವಸ್ಥೆ ಅಧಿಕೃತವಾಗಿ ಜಾರಿಗೆ ಬರಲಿದೆ
