Homeರಾಜ್ಯಮತ್ತೆ ಹಾಲಿನ ದರ ಏರಿಕೆ : ರಾಜ್ಯದ ಜನರಿಗೆ ಮತ್ತೊಂದು ಶಾಕ್ 'ಗ್ಯಾರಂಟಿ'

ಮತ್ತೆ ಹಾಲಿನ ದರ ಏರಿಕೆ : ರಾಜ್ಯದ ಜನರಿಗೆ ಮತ್ತೊಂದು ಶಾಕ್ ‘ಗ್ಯಾರಂಟಿ’

ಬೆಂಗಳೂರು, ಸೆ.18-ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನ ಸಾಮಾನ್ಯರಿಗೆ ಮತ್ತೊಂದು ಆಘಾತ ಕಾದಿದೆ. ಹಾಲಿನ ಮಾರಾಟ ದರವನ್ನು 5 ರಿಂದ 10 ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೇ ಹಾಲಿನ ದರ ಹೆಚ್ಚಳವಾಗಲಿದೆ.

ಒಕ್ಕೂಟಗಳ ಮನವಿ ಹಾಗೂ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸುವ ಹಾಗೂ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಿಂದ ಖರೀದಿಸುವ ಹಾಲಿ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಹಾಗೂ ಕೆಎಂಎಫ್‌ಗೆ ಮನವಿ ಮಾಡಿವೆ. ವಿಶೇಷ ಅಧಿವೇಶನದ ಸಂದರ್ಭದಲ್ಲಿ ಇಲ್ಲವೇ ಅನಂತರ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಾಲಿನ ಮಾರಾಟ ದರವನ್ನು ಒಂದು ಲೀಟರ್‌ಗೆ ಮೂರು ರೂಪಾಯಿ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಹೆಚ್ಚಳ ಮಾಡುವ ಹಾಲಿನ ದರವನ್ನು ಹಾಲು ಉತ್ಪಾದಕರಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ರಾಮನಗರ ಜಿಲ್ಲಾ ಹಾಲು ಒಕ್ಕೂಟವು ಲೀಟರ್‌ಗೆ 10 ರೂ. ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿರುವುದಲ್ಲದೆ, ಇತ್ತೀಚೆಗೆ ಪ್ರತಿಭಟನೆಯನ್ನು ಮಾಡಿತ್ತು. ಬೇರೆ ರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ನ ಹಾಲಿನ ದರ ಕಡಿಮೆ ಇದ್ದು, ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಕೆಲವು ಒಕ್ಕೂಟಗಳು ಒಂದು ಲೀಟರ್‌ ಹಾಲಿನ ಖರೀದಿ ದರವನ್ನು ಐದು ರೂಪಾಯಿಯನ್ನಾದರೂ ಹೆಚ್ಚಳ ಮಾಡುವಂತೆ ಆಗ್ರಹಿಸಿವೆ. ತೀವ್ರ ಬರದಿಂದಾಗಿ ಜಾನುವಾರಗಳ ಮೇವಿಗೆ ಅಭಾವ ಉಂಟಾಗಿದೆ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಶು ಆಹಾರದ ಬೆಲೆಯೂ ದುಬಾರಿಯಾಗಿದ್ದು, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣವನ್ನು ನೀಡಲಾಗುತ್ತಿದೆ.

ಹಾಲು ಒಕ್ಕೂಟಗಳು ಪ್ರಸ್ತುತ ಒಂದು ಲೀಟರ್‌ ಹಾಲಿಗೆ 35 ರೂ. ನಂತೆ ರೈತರಿಂದ ಹಾಲು ಖರೀದಿಸುತ್ತಿವೆ. ಒಂದು ಲೀಟರ್‌ ಹಾಲಿಗೆ ಪ್ರಸುತ್ತ 48 ರೂ. ಮಾರಾಟ ದರವಿದೆ. ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಖರೀದಿ ಮತ್ತು ಮಾರಾಟ ದರದಲ್ಲಿ ವ್ಯತ್ಯಾಸವಿದೆ. ಹಾಲಿನ ಜೊತೆಗೆ ಮೊಸರು, ತುಪ್ಪ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ದುಬಾರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

RELATED ARTICLES
spot_img

Latest News