Homeರಾಜ್ಯವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಮುಂದಾದ ರಾಜ್ಯ ಸರ್ಕಾರ : ವಿಧಾನಸೌಧದ ಮೆಟ್ಟಿಲುಗಳ ವಿಶೇಷ ಕಾರ್ಯಕ್ರಮ

ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಮುಂದಾದ ರಾಜ್ಯ ಸರ್ಕಾರ : ವಿಧಾನಸೌಧದ ಮೆಟ್ಟಿಲುಗಳ ವಿಶೇಷ ಕಾರ್ಯಕ್ರಮ

Special Independence Day program on the steps of Vidhana Soudha

ಬೆಂಗಳೂರು, ಆ.1- ಈ ಬಾರಿಯ 79ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರಆಗಸ್ಟ್‌ 15ರಂದು ಇದೇ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸ್ವತಂತ್ರ ಹಬ್ಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸರ್ಕಾರದ ಯೋಜನೆಯಂತೆ, ಆ. 15ರಂದು ಬೆಳಿಗ್ಗೆ ಮುಖ್ಯಮಂತ್ರಿ ಅವರು ಮಾಣೆಕ್‌ಶಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಯ ನಂತರ ಕಾರ್ಯಕ್ರಮಗಳು ವಿಧಾನಸೌಧದ ಮೆಟ್ಟಿಲುಗಳತ್ತ ಸ್ಥಳಾಂತರವಾಗಲಿದೆ.

ರಾಜ್ಯದ 31 ಜಿಲ್ಲೆಗಳ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳ ಅಧಿಕಾರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮೈಸೂರು ದಸರಾ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಜನೋತ್ಸವವಾಗಿ ಆಚರಿಸುವ ಉದ್ದೇಶದಿಂದ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ.

ಇದೇ ಮೊದಲ ಬಾರಿಗೆ ಆಗಸ್ಟ್‌ 15ರಂದು ವಿಧಾನಸೌಧ ವೀಕ್ಷಣೆಗೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.ಶಾಂತವೇರಿ ಗೋಪಾಲಗೌಡರ ವೃತ್ತದ ಸಮೀಪ ಬೃಹತ್‌ ವೇದಿಕೆ ನಿರ್ಮಿಸಿ, ಶಾಲಾ ಮಕ್ಕಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಸ್ವಾತಂತ್ರ್ಯೋತ್ಸವ ಕುರಿತ ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಮಧ್ಯಾಹ್ನ 3 ಗಂಟೆಯ ನಂತರ ಪೊಲೀಸ್‌‍ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ ಆಯೋಜಿಸಲಾಗಿದೆ.ನಂತರ ರಾಜ್ಯದ ವಿವಿಧ ಜಿಲ್ಲೆಗಳ ಸ್ಥಬ್ದ ಚಿತ್ರ ಪ್ರದರ್ಶನ ನಡೆಯುತ್ತದೆ.

ಸಂಜೆ 7 ಗಂಟೆಯ ನಂತರ ಪಟಾಕಿ ಪ್ರದರ್ಶನ, ಸಿಡಿಮದ್ದು ಪ್ರದರ್ಶನ, ಗಾಂಧಿ ಪ್ರತಿಮೆ ಎದುರು ಹಾಡು, ನೃತ್ಯ ಹಾಗೂ ಏಕಪಾತ್ರಾಭಿನಯ ಕಾರ್ಯಕ್ರಮಗಳು ನಡೆಯಲಿವೆ. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಕ್ಕಳು ಹಾಗೂ ಸಾರ್ವಜನಿಕರು ಮುಂಚಿತವಾಗಿ ಹೆಸರು ನೋಂದಾಯಿಸಬೇಕಾಗಿದೆ.ಇಡೀ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಪೊಲೀಸ್‌‍ ಇಲಾಖೆಗೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸ್ವಾತಂತ್ರ್ಯೋತ್ಸವವನ್ನು ಈ ಬಾರಿ ರಾಜ್ಯದ ಜನರಿಗೆ ವಿಶಿಷ್ಟ ಅನುಭವವಾಗುವಂತೆ ಆಚರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ.

RELATED ARTICLES

Latest News