ಬೆಂಗಳೂರು, ಆ.1 – ಜಿಬಿಎ ವ್ಯಾಪ್ತಿಯಲ್ಲಿರುವ ಪಂಚ ಪಾಲಿಕೆಗಳನ್ನು ರದ್ದುಗೊಳಿಸಿ ಕೇವಲ ಎರಡು ಪಾಲಿಕೆಗಳನ್ನು ರಚಿಸುವುದು ಸೂಕ್ತ ಎಂಬ ವಾದ ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬಂದಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಚಿಸಲಾಗಿರುವ ಐದು ನಗರಪಾಲಿಕೆಗಳ ಬಗ್ಗೆ ಇದೀಗ ಕಾಂಗ್ರೆಸ್‌ನೊಳಗೇ ಅಪಸ್ವರ ಕೇಳಿಬಂದಿದ್ದು, ಮತದಾರರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನಗರಪಾಲಿಕೆಗಳ ಪುನರ್‌ವಿಂಗಡಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರೊಬ್ಬರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪತ್ರದಲ್ಲಿ, ಪ್ರಸ್ತುತ ನಗರದಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದ್ದು, ಅದರ ಬಳಿಕ ಮತದಾರರ ಸಂಖ್ಯೆ ಗಣನೀಯವಾಗಿ ಇಳಿಯುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಈಗ ನಗರದಲ್ಲಿ ಸುಮಾರು 1.3 ಕೋಟಿ ಮತದಾರರಿದ್ದು, ಎಸ್‌ಐಆರ್ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಅದು ಸುಮಾರು 70 ಲಕ್ಷಕ್ಕೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇವಲ 70 ಲಕ್ಷ ಮತದಾರರಿಗೆ ಐದು ನಗರಪಾಲಿಕೆಗಳ ಅಗತ್ಯವಿಲ್ಲ. ಕೆಲ ನಗರಪಾಲಿಕೆಗಳಲ್ಲಿ ಕೇವಲ 10 ರಿಂದ 12 ಲಕ್ಷ ಮತದಾರರು ಮಾತ್ರ ಉಳಿಯಲಿದ್ದು, ಅಂತಹ ಪರಿಸ್ಥಿತಿಯಲ್ಲಿ ಎರಡು ನಗರಪಾಲಿಕೆಗಳೇ ಸಾಕು ಎಂದು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಐದು ನಗರಪಾಲಿಕೆಗಳ ರಚನೆಯ ನಂತರ ಕೆಲವು ಪಾಲಿಕೆಗಳು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಗತ್ಯ ಸಿಬ್ಬಂದಿಯ ಕೊರತೆಯೂ ತೀವ್ರವಾಗಿದೆ. ಇದರಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಉಲ್ಲೇಖಿಸಿದ್ದಾರೆ.
ನಗರಪಾಲಿಕೆಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಿದರೆ ಆಡಳಿತಾತ್ಮಕ ಹಾಗೂ ಆರ್ಥಿಕ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಹೀಗಾಗಿ ಮತದಾರರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನಗರಪಾಲಿಕೆಗಳ ಪುನರ್‌ವಿಂಗಡಣೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.
ಈ ಬೆಳವಣಿಗೆ ಐದು ನಗರಪಾಲಿಕೆಗಳ ವ್ಯವಸ್ಥೆ ಕುರಿತು ಆಡಳಿತ ಹಾಗೂ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
