Homeಬೆಂಗಳೂರುಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ವೇಳಾಪಟ್ಟಿ ಮಾರ್ಪಾಡು

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ವೇಳಾಪಟ್ಟಿ ಮಾರ್ಪಾಡು

Major train disruptions at KSR Bengaluru due to signalling upgrade, platform extension

ಬೆಂಗಳೂರು, ಜೂ.16- ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ರೈಲ್ವೆ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮತ್ತು ಪ್ರಮುಖವಾಗಿ ಇಡೀ ದೇಶದಲ್ಲೇ ಗಮನ ಸೆಳೆದಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತಷ್ಟು ವಿಸ್ತಾರಗೊಳ್ಳಲಿದೆ.ಈಗಾಗಲೇ ಬೈಯ್ಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ರೈಲು ನಿಲ್ದಾಣ ವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಿರುವ ನೈಋತ್ಯ ರೈಲ್ವೆ ಅದೇ ಮಾದರಿಯಲ್ಲಿ ಕಂಟೋನೆಂಟ್‌ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ.

ಈ ನಡುವೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಕಣನ ಸೆಳೆಯುವಂತೆ ದೊಡ್ಡ ಮಟ್ಟದಲ್ಲಿ ಪುನರ್‌ ನಿರ್ಮಾಣ ಕಾಮಗಾರಿಗಳು ಸದ್ಯದಲ್ಲಿ ಆರಂಭಗೊಳ್ಳಲಿದ್ದು, ಇದರಿಂದ ಇಲ್ಲಿಂದ ಹೊರಡುವ ಕೆಲ ರೈಲುಗಳ ವೇಳಾಪಟ್ಟಿ ಬದಲಿಸಿ ರೈಲು ಸೇವೆಯನ್ನು ಬೇರೆ ನಿಲ್ದಾಣಗಳಿಗೆ ಮಾರ್ಪಡಿಸಲಾಗುತ್ತಿದೆ.

ಈಗಾಗಲೇ ಹಳಿಗಳನ್ನು ದುರಸ್ತಿಗೊಳಿಸುವ ಕಾಮಗಾರಿಗಳು ಆರಂಭಗೊಂಡಿದ್ದು, ಇದರಿಂದ ಸುಮಾರು ಇಲ್ಲಿಂದ ಹೊರಡುವ 50ಕ್ಕೂ ಹೆಚ್ಚು ರೈಲುಗಳನ್ನು ಕಂಟೋನೆಂಟ್‌ ಅಥವಾ ವಿಶ್ವೇಶ್ವರಯ್ಯ ನಿಲ್ದಾಣಗಳಿಗೆ ಬದಲಿಸಲಾಗಿದೆ. ಇನ್ನು ಉಳಿದಂತೆ ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳು ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದಲೇ ಸಂಚರಿಸಲಿದ್ದು, ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.

ಪ್ರಮುಖವಾಗಿ ವಂದೇ ಭಾರತ್‌ ಎಕ್‌್ಸಪ್ರೆಸ್‌‍ ರೈಲಿನಲ್ಲೂ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಬೆಂಗಳೂರಿಗೆ ಬರುವ ರೈಲುಗಳನ್ನು ಯಶವಂತಪುರದಲ್ಲೇ ನಿಲ್ಲಿಸಲಾಗುತ್ತದೆ. ಕಲಬುರಗಿ, ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ಬರುವ ರೈಲುಗಳು ಕೂಡಾ ಕೆ.ಆರ್‌.ಪುರ, ಯಶವಂತಪುರ ರೈಲ್ವೆ ನಿಲ್ದಾಣದಲ್ಲೇ ನಿಲ್ಲಲಿವೆ.

ಪ್ರಯಾಣಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಲು ಕಡಿಮೆ ಅಂತರದ ರೈಲುಗಳು ಯಶವಂತಪುರ ಮತ್ತು ಬೈಯ್ಯಪ್ಪನಹಳ್ಳಿಯಿಂದ ಸಂಚರಿಸಲಿವೆ.ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೈಋತ್ಯ ರೈಲ್ವೆ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ. ಸೇವೆಯನ್ನು ಆಧುನೀಕರಣಗೊಳಿಸುವುದೂ ಸೇರಿದಂತೆ ಕೆಲವು ಮೇಲ್ದರ್ಜೆ ಕಾಮಗಾರಿಗಳು ನಡೆಯುವುದರಿಂದ ಸ್ವಲ್ಪಮಟ್ಟಿನ ಅಡಚಣೆಗಳು ಉಂಟಾಗಬಹುದು ಎಂದು ಇದೇ ವೇಳೆ ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್‌ ತಿಳಿಸಿದ್ದಾರೆ.

ಸದ್ಯದಲ್ಲಿಯೇ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿಗಳನ್ನು ಆರಂಭಿಸಲು ಈಗಾಗಲೇ ನಿರ್ಧರಿಸಲಾಗಿದ್ದು, ಅಲ್ಲಿಯವರೆಗೆ ಇಲ್ಲಿಂದ ರೈಲುಗಳ ಸಂಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದಾರೆ.ಸದ್ಯ ಹಳಿಗಳನ್ನು ದುರಸ್ತಿಗೊಳಿಸುತ್ತಿರುವ ಕಾರಣ ಕೆಲವೊಂದು ರೈಲುಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ ಯಾವುದೇ ರೈಲುಗಳನ್ನೂ ರದ್ದುಪಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚನ್ನಪಟ್ಟಣ ರೈಲು ನಿಲ್ದಾಣ ಸಮೀಪದ ಎಲೇಕೆರೆ ಬಳಿಯಿರುವ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಅನ್ನು ಜೂ.18 ರಂದು ಶಾಶ್ವತವಾಗಿ ಮುಚ್ಚಲಾಗುವುದು ಮತ್ತು ಸಾರ್ವಜನಿಕರು ರಸ್ತೆ ಮೇಲ್ಸೇತುವೆ ಮಾರ್ಗವನ್ನು ಬಳಸುವಂತೆ ಮನವಿ ಮಾಡಲಾಗಿದೆ.ಇದರ ನಡುವೆ ಸಂಪರ್ಕ ಜಾಲದಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ದೂರದ ಸುಮಾರು 116 ರೈಲುಗಳನ್ನು ಬೆಂಗಳೂರಿನ ಆಚೆಯೇ ನಿಲ್ಲಿಸಲು ಅಥವಾ ರದ್ದುಪಡಿಸಲು ನಿರ್ಧರಿಸಲಾಗಿದೆ.

RELATED ARTICLES

Latest News