Homeರಾಜ್ಯ2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಯಾಗಲು ಬೆಂಬಲಿಗರ ಮೂಲಕ ಸಚಿವಾಕಾಂಕ್ಷಿಗಳ ಒತ್ತಡ

2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಯಾಗಲು ಬೆಂಬಲಿಗರ ಮೂಲಕ ಸಚಿವಾಕಾಂಕ್ಷಿಗಳ ಒತ್ತಡ

2nd phase of cabinet expansion next week

ಬೆಂಗಳೂರು, ಜೂ. 17- ಮುಂದಿನವಾರದ ಒಳಗಾಗಿ ಸಚಿವ ಸಂಪುಟ 2ನೇ ಹಂತದ ವಿಸ್ತರಣೆ ಸಾಧ್ಯತೆಯಿರುವುದರಿಂದ ಸಚಿವಾಕಾಂಕ್ಷಿಗಳು ಬೆಂಬಲಿಗರ ಮೂಲಕ ಪ್ರತಿಭಟನೆ ನಡೆಸಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ದಿನೇ ದಿನೇ ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡ, ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ವಂಚಿತ ಹಲವು ಹಿರಿಯ ನಾಯಕರು ಒಳಗೊಳಗೆ ತಮ ಅಸಮಾಧಾನವನ್ನು ನುಂಗಿಕೊಂಡು 2ನೇ ಹಂತದ ವಿಸ್ತರಣೆಯಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಸಂಪುಟದಲ್ಲಿ ಈವರೆಗೂ 14 ಮಂದಿ ಸಚಿವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಬಾಕಿಯಿರುವ 20 ಸ್ಥಾನಗಳ ಭರ್ತಿಗೆ ಜೂನ್‌ 23 ಅಥವಾ 25 ರಂದು 2ನೇ ಹಂತದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಹಿರಿಯ ನಾಯಕ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಅದೇ ನಿರೀಕ್ಷೆಯಲ್ಲಿ ಶಾಸಕರು ಲಾಬಿ ಆರಂಭಿಸಿದ್ದಾರೆ.

ಮೊದಲಿಗೆ ಜಮೀರ್‌ ಅಹಮದ್‌ ಖಾನ್‌ ಬೆಂಬಲಿಗರು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿ, ಸಚಿವ ಸ್ಥಾನ ನೀಡಲು ಆಗ್ರಹಿಸಿದ್ದರು. ಬಹಳಷ್ಟು ಮಂದಿ ಮಾಜಿ ಸಚಿವರು, ಹಿರಿಯ ನಾಯಕರು ಪಕ್ಷದ ವಿರುದ್ಧ ಪ್ರತಿಭಟನೆ ಬೇಡ ಎಂದು ಸಂಧಾನ ಹಾಗೂ ಪ್ರಾರ್ಥನೆ ಮಾರ್ಗ ಹಿಡಿದಿದ್ದಾರೆ. ಆದರೆ ಮೊಟ್ಟ ಮೊದಲಿಗೆ ಜಮೀರ್‌ ಅವರು ಪ್ರತಿಭಟನೆ ಮಾರ್ಗ ಹಿಡಿಯುವ ಮೂಲಕ ಸೆಡ್ಡು ಹೊಡೆದಿದ್ದಾರೆ. ಆದರೆ ಅದು ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ. ನಿರಂತರವಾಗಿ ಮೂರ್ನಾಲ್ಕು ದಿನ ಪ್ರತಿಭಟನೆ ನಡೆಸಿದ ಜಮೀರ್‌ ಬೆಂಬಲಿಗರು ಹಿರಿಯ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.

ತಮ ಹಾಗೂ ಪಕ್ಷದ ವಿರುದ್ಧ ಕೆಲಸ ಮಾಡಿದ ವ್ಯಕ್ತಿಗೆ ಸಚಿವ ಸ್ಥಾನ ಕೊಡಿಸಬೇಕೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ ಬಳಿಕ ಜಮೀರ್‌ ಬೆಂಬಲಿಗರು ತಣ್ಣಗಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ನಾಗಾ ಠಾಣಾ ಬಸ್‌‍ ನಿಲ್ದಾಣದಲ್ಲಿ ನೂರಾರು ಸಂಖ್ಯೆಯ ಬೆಂಬಲಿಗರು ಧರಣಿ ನಡೆಸಿದ್ದು, ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಆಗ್ರಹಿಸಿದ್ದರು.

ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ ಅವರ ಬೆಂಬಲಿಗರು ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಸಚಿವ ಸ್ಥಾನ ದೊರೆಯದೇ ಇದ್ದರೆ ಪದಾಧಿಕಾರಿಗಳು ಕಾಂಗ್ರೆಸ್‌‍ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಶಾಸಕ ಬಸವರಾಜರಾಯ ರೆಡ್ಡಿ ಅವರ ಬೆಂಬಲಿಗರು ಸಚಿವ ಸ್ಥಾನ ನೀಡುವಂತೆ ಪೂಜೆ, ಪ್ರಾರ್ಥನೆಗಳ ಮೊರೆ ಹೋಗಿದ್ದಾರೆ. ರಾಯರೆಡ್ಡಿ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ಸಲಹೆಗಾರರಾಗಿ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಅನುಭವಿಸಿದ್ದರು.

ಸಿದ್ದರಾಮಯ್ಯ ಅವರ ನಾಯಕತ್ವದ ಬದಲಾವಣೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲೇ ಸಿದ್ದರಾಮಯ್ಯ ಅವರ ಆಯ್ಕೆಯಾಗಿದೆ. ಬದಲಾವಣೆಗೂ ಶಾಸಕಾಂಗ ಸಭೆಯಲ್ಲೇ ನಿರ್ಧಾರವಾಗಬೇಕು. ಕಾಂಗ್ರೆಸ್‌‍ ಹೈಕಮಾಂಡ್‌ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಆದರೆ ರಾಯರೆಡ್ಡಿ ಅವರ ಸವಾಲಿನಂತೆ ಹೈಕಮಾಂಡ್‌ ಸಿದ್ದರಾಮಯ್ಯಅವರಿಂದ ರಾಜೀನಾಮೆ ಕೊಡಿಸಿ, ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಲ್ಲದೇ ಶಾಸಕಾಂಗ ಸಭೆಯಲ್ಲಿ ಅದನ್ನು ಅಂಗೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ರಾಯರೆಡ್ಡಿ ಅವರು, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಿದ್ದಂತೆ ಸಚಿವ ಸಂಪುಟ ಸೇರುವ ಆಸೆಯನ್ನೇ ಕೈ ಬಿಟ್ಟಿದ್ದರು. ಅದರೂ ಪರೋಕ್ಷವಾಗಿ ಬೆಂಬಲಿಗರ ಮೂಲಕ ವಿಶೇಷ ಪೂಜೆ, ಪ್ರಾರ್ಥನೆಗಳ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ.

ಈ ಹಿಂದೆ ಮಾಜಿ ಸಚಿವ ಶಿವರಾಜ ತಂಗಡಗಿ ಬೆಂಬಲಿಗರು ಸಚಿವ ಸ್ಥಾನಕ್ಕಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅದನ್ನು ತಡೆದಿದ್ದ ಶಿವರಾಜ ತಂಗಡಗಿ ಪ್ರತಿಭಟನೆ ನಡೆಸುವುದರಿಂದ ಪಕ್ಷಕ್ಕೆ ಹಾನಿಯಾಗಲಿದೆ. ಪೂಜೆ, ಪ್ರಾರ್ಥನೆಗಳ ಮೂಲಕ ಒತ್ತಡ ಹೇರಿದರೆ ಸಾಕು ಎಂದು ಸಲಹೆ ನೀಡಿದ್ದರು.

ಕೆಲವು ಶಾಸಕರು ಪ್ರಮುಖ ನಾಯಕರನ್ನು ಭೇಟಿ ಮಾಡಿ ನೇರವಾಗಿ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಹಿಂಬಾಲಕರ ಮೂಲಕ ಪ್ರತಿಭಟನೆ ನಡೆಸಿ, ಶತಾಯಗತಾಯ ಸಂಪುಟ ಸೇರಲೇಬೇಕೆಂದು ಜಿದ್ದಿಗೆ ಬಿದ್ದಿದ್ದಾರೆ. ಬೆಂಬಲಿಗರ ಪ್ರತಿಭಟನೆಗಳು ಕಾಂಗ್ರೆಸ್‌‍ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿವೆ. ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವವರು ಬಂಡಾಯದ ಬಾವುಟ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ.

RELATED ARTICLES
spot_img

Latest News