Homeಬೆಂಗಳೂರುಗ್ರೇಟರ್‌ ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳೇ ಇಲ್ಲ : ಪಾದಚಾರಿಗಳ ಗೋಳು ಕೇಳುವವರಿಲ್ಲ

ಗ್ರೇಟರ್‌ ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳೇ ಇಲ್ಲ : ಪಾದಚಾರಿಗಳ ಗೋಳು ಕೇಳುವವರಿಲ್ಲ

There are no footpaths in Greater Bengaluru:

-ವಿ.ರಾಮಸ್ವಾಮಿ ಕಣ್ವ
ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್‌ ಸಿಟಿ ಬೆಂಗಳೂರು ಮಹಾನಗರ ಎಲ್ಲಾ ವರ್ಗದ ಜನರ ಮೆಚ್ಚಿನ ತಾಣವಾಗಿದೆ. ನಗರದ ಬೆಳವಣಿಗೆಯ ವೇಗ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ರಸ್ತೆಗಳ ಮೂಲಸೌಕರ್ಯ ಮತ್ತು ಪಾದಚಾರಿಗಳ ಸುರಕ್ಷತೆ ಮಾತ್ರ ಮರೀಚಿಕೆಯಾಗಿದೆ.

ರಸ್ತೆಗಳ ದುಃಸ್ಥಿತಿ, ಅಸಮರ್ಪಕ ಪಾದಚಾರಿ ಮಾರ್ಗಗಳು, ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ವಾಹನ ಚಾಲಕರು/ಸವಾರರ ಅವಸರದ ಮನೋಭಾವ, ಕುಡಿದು ವಾಹನ ಚಾಲನೆ ಮುಂತಾದ ಕಾರಣಗಳಿಂದ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು ನೀಡಿರುವ ಅಂಕಿ ಅಂಶಗಳ ಪ್ರಕಾರ, 2024ರಲ್ಲಿ ನಗರದಲ್ಲಿ ಒಟ್ಟು 4769 ರಸ್ತೆ ಅಪಘಾತಗಳು ಸಂಭವಿಸಿದ್ದು, 894 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 246 ಮಂದಿ ಪಾದಚಾರಿಗಳು ಸೇರಿದ್ದಾರೆ.

2025ರಲ್ಲಿ 4893 ಅಪಘಾತಗಳು ಉಂಟಾಗಿದ್ದು ಒಟ್ಟು 878 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 260 ಮಂದಿ ಪಾದಚಾರಿಗಳಿದ್ದಾರೆ. ಈ ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ ಒಟ್ಟು 1825 ಅಪಘಾತಗಳಾಗಿದ್ದು, 348 ಮಂದಿ ಅಸುನೀಗಿದ್ದಾರೆ. ಇದರಲ್ಲಿ 90 ಮಂದಿ ಪಾದಚಾರಿಗಳು ಸೇರಿದ್ದಾರೆ.

ಅಂಕಿಅಂಶಗಳನ್ನು ಅವಲೋಕಿಸಿ ದಾಗ ವರ್ಷದಿಂದ ವರ್ಷಗಳಿಗೆ ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಲೇ ಇವೆೆ. ಅದರಂತೆಯೇ ಪಾದಚಾರಿಗಳ ಸಾವಿನ ಸಂಖ್ಯೆಯೂ ಸಹ ಏರಿಕೆಯಾಗುತ್ತಿದೆ. ಇದನ್ನು ನೋಡಿದರೆ ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಉಳಿಗಾಲ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಪಾದಚಾರಿಗಳೇ ಹೆಚ್ಚು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರು ವುದು ಅತ್ಯಂತ ಕಳವಳಕಾರಿ ಸಂಗತಿ.

ಅತಿ ವೇಗದ ವಾಹನ ಚಾಲನೆ, ನಿರ್ಲಕ್ಷ್ಯ ಹಾಗೂ ಅಜಾಗೃತ ಚಾಲನೆ, ಹಾಳಾದ, ಗುಂಡಿ ಬಿದ್ದಿರುವ ರಸ್ತೆಗಳು, ಅಸಮರ್ಪಕ ಮತ್ತು ಅತಿಕ್ರಮಿತ ಪಾದಚಾರಿ ಮಾರ್ಗಗಳು, ಅಕ್ರಮ ಪಾರ್ಕಿಂಗ್‌, ರಾತ್ರಿ ವೇಳೆ ಸಮರ್ಪಕ ಬೆಳಕಿನ ಕೊರತೆ, ಮೊಬೈಲ್‌ ಬಳಕೆ, ಮದ್ಯಪಾನ ಮಾಡಿ ವಾಹನ ಚಾಲನೆ ಇನ್ನು ಮುಂತಾದ ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಪಾದಚಾರಿಗಳು ಅಪಘಾತಕ್ಕೆ ಒಳಗಾಗುತ್ತಿದ್ದಾರೆ.

ಬೆಂಗಳೂರು ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲೇ ಸಮರ್ಪಕವಾದ ಫುಟ್‌ಪಾತ್‌ಗಳೇ ಇಲ್ಲ. ಇನ್ನು ಕೆಲವು ಫುಟ್‌ಪಾತ್‌ಗಳು ಕೂಡ ಗುಂಡಿ, ಹಳ್ಳ ಬಿದ್ದು ಹಾಳಾಗಿವೆ. ಕೆಲವು ಕಡೆ ರಸ್ತೆಬದಿ ವ್ಯಾಪಾರಿಗಳು ಈ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದರೆ, ಅನೇಕ ಕಡೆಗಳಲ್ಲಿ ಫುಟ್‌ಪಾತ್‌ಗಳೇ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಸ್ಥಳಗಳಾಗಿವೆ. ಹೀಗೆ ಹಲವು ಕಾರಣಗಳಿಂದ ರಸ್ತೆಯ ಮೇಲೆಯೇ ಪಾದಚಾರಿಗಳು ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಸಂಚಾರ ದಟ್ಟಣೆ ನಡುವೆಯೂ ಅವಕಾಶ ಸಿಕ್ಕ ತಕ್ಷಣ ವೇಗವಾಗಿ ವಾಹನ ಚಲಾಯಿಸುವುದು, ಸಿಗ್ನಲ್‌ ಜಂಪಿಂಗ್‌, ಜೀಬ್ರಾ ಕ್ರಾಸಿಂಗ್‌ಗಳನ್ನು ನಿರ್ಲಕ್ಷಿಸುವುದು ಬೆಂಗಳೂರು ಮಹಾನಗರದಲ್ಲಿ ಸಾಮಾನ್ಯವಾಗಿದೆ.

ವಿಶ್ವ ಮಟ್ಟದ ನಗರ ಎಂಬ ಹೆಗ್ಗಳಿಕೆ ಪಡೆದಿರುವ ಈ ಬೆಂಗಳೂರು ನಗರದ ಅನೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಂತೂ ರಸ್ತೆ ಯಾವುದು? ಗುಂಡಿ ಯಾವುದು? ಎಂದು ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆ ನೀರು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡವರ ಉದಾಹರಣೆಯೂ ಸಹ ಇದೆ.

ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರ/ಚಾಲಕರು ಏಕಾಏಕಿ ದಿಕ್ಕು ಬದಲಾಯಿಸುವುದರಿಂದ ಪಾದಚಾರಿಗಳು ಅಪಘಾತಗಳಲ್ಲಿ ಬಲಿಯಾಗುತ್ತಿದ್ದಾರೆ.
ಮೊಬೈಲ್‌ ಬಳಕೆ, ಮದ್ಯಪಾನ ಮಾಡಿ ಚಾಲನೆ, ಏಕಮುಖ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಹೀಗೆ ವೇಗವಾಗಿ ಚಲಿಸುವ ವಾಹನಗಳ ನಡುವೆ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಶಾಲಾ ಮಕ್ಕಳು ರಸ್ತೆ ದಾಟುವುದು ತುಂಬ ಕಷ್ಟಕರ. ಆತಂಕ ಮತ್ತು ಅವಸರದಲ್ಲೇ ಕೆಲವರು ಅಪಘಾತಕ್ಕೆ ಒಳಗಾಗುತ್ತಾರೆ.

ಪ್ರತಿ ರಸ್ತೆಯಲ್ಲೂ ಗುಣಮಟ್ಟದ ಫುಟ್‌ಪಾತ್‌ ನಿರ್ಮಾಣ ಮಾಡಲೇಬೇಕು. ಪಾದಚಾರಿ ರಸ್ತೆಗಳ ಅತಿಕ್ರಮಣವನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಬೇಕು. ಜೀಬ್ರಾ ಕ್ರಾಸಿಂಗ್‌ಗಳ ಹೆಚ್ಚಳ, ಪಾದಚಾರಿ ಸಿಗ್ನಲ್‌ ವ್ಯವಸ್ಥೆ, ಶಾಲಾ ವಲಯಗಳಲ್ಲಿ ವೇಗದ ಮಿತಿಗೆ ಕಟ್ಟುನಿಟ್ಟಿನ ನಿಯಮ ಜಾರಿ, ರಾತ್ರಿ ವೇಳೆ ಉತ್ತಮ ಬೆಳಕು, ಮದ್ಯಪಾನ ಮಾಡದೆ ವಾಹನ ಚಾಲನೆ, ಮೊಬೈಲ್‌ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ, ಅಗತ್ಯವಿರುವ ಕಡೆಗಳಲ್ಲಿ ಇನ್ನಷ್ಟು ಸ್ಕೈವಾಕ್‌ಗಳ ನಿರ್ಮಾಣ ಹಾಗೂ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಪಾದಚಾರಿಗಳ ಸಾವು ಕಡಿಮೆಯಾಗಬಹುದು ಎಂಬುದು ಸಂಚಾರ ತಜ್ಞರ ಮತ್ತು ಸಂಚಾರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್‌‍ ಅಧಿಕಾರಿಗಳ ಅಭಿಪ್ರಾಯ.

ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಪಾದಚಾರಿಗಳ ಅಗತ್ಯಗಳಿಗೆ ಬೇಕಾದಷ್ಟು ಆದ್ಯತೆ ನೀಡಲಾಗುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ. ವಾಹನಗಳಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆಯೇ ಹೊರತು ಪಾದಚಾರಿಗಳ ಸುರಕ್ಷತೆಯನ್ನು ಕಡಗಣಿಸಲಾಗುತ್ತಿದೆ ಎಂಬ ಆರೋಪಗಳಿವೆ. ಪಾದಚಾರಿಗಳು ರಸ್ತೆ ದಾಟಲು ನಗರದ ಕೆಲವು ಕಡೆಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳಲ್ಲಿ ಅಳವಡಿಸಿರುವ ಲಿಫ್‌್ಟಗಳು ಬಹುತೇಕ ಕಡೆಗಳಲ್ಲಿ ಕೆಟ್ಟು ಹೋಗಿವೆ. ಇದರಿಂದ ಹಿರಿಯ ನಾಗರಿಕರು ಎತ್ತರದ ಸ್ಕೈವಾಕ್‌ಗಳನ್ನು ಏರಿ, ಇಳಿಯುವುದಕ್ಕೆ ತುಂಬ ಕಷ್ಟವಾಗುತ್ತಿದೆ. ಆದ್ದರಿಂದ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವಾಹನ ಸವಾರ/ಚಾಲಕರು ಪಾದಚಾರಿಗಳ ಜೀವಕ್ಕೆ ಸಮಾನ ಮೌಲ್ಯ ನೀಡಿದಾಗ ಮಾತ್ರ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಅಮಾಯಕ ಪಾದಚಾರಿಗಳು ಜೀವ ಕಳೆದು ಕೊಳ್ಳಬೇಕಾಗುತ್ತದೆ.

RELATED ARTICLES
spot_img

Latest News