ಬೆಂಗಳೂರು,ಸೆ.21-ನಗರದಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದ್ದು, ರಾತ್ರಿ ಮಾರಕಾಸ್ತ್ರಗಳನ್ನಿಡಿದು ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ 8.30 ರ ಸುಮಾರಿನಲ್ಲಿ ಸರ್ಕಲ್ ಮಾರಮ ದೇವಸ್ಥಾನ, 6ನೇ ಕ್ರಾಸ್ ಉತ್ತರಹಳ್ಳಿ ರಸ್ತೆ ಬದಿ ನಾಲ್ಕೈದು ಸ್ನೇಹಿತರು ಮಾತನಾಡುತ್ತಾ ನಿಂತಿದ್ದಾಗ ನಾಲ್ಕೈದು ಬೈಕ್ಗಳಲ್ಲಿ ಬಂದ ಆರೇಳು ಮಂದಿ ಪುಂಡರು ಇವರ ಬಳಿ ಬಂದು ಸೇಂದಿಲ್ ಎಲ್ಲಿ ಎಂದು ಕೇಳಿ ಮಚ್ಚು,ಲಾಂಗ್ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.
ಆ ವೇಳೆ ಸ್ನೇಹಿತರು ದಿಕ್ಕಾಪಾಲಾಗಿ ಓಡಿದ್ದು, ಈ ಪೈಕಿ ಕಿರಣ್ ಎಂಬಾತ ಸಿಕ್ಕಿಕೊಂಡು ಮಚ್ಚಿನ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ.ನಂತರ ದುಷ್ಕರ್ಮಿಗಳು ಬೈಕ್ ಹತ್ತಿಕೊಂಡು ಪರಾರಿಯಾಗಿದ್ದಾರೆ. ದಾಳಿಯಿಂದ ಗಾಯಗೊಂಡಿದ್ದ ಕಿರಣ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಾದ ಕೆಲವೇ ನಿಮಿಷಗಳಲ್ಲಿ ಇದೇ ಗುಂಪು ಉತ್ತರಹಳ್ಳಿ ರಸ್ತೆಯ ಅರೆಹಳ್ಳಿ ಆರ್ಚ್ ಬಳಿಗೆ ರಾತ್ರಿ 8.50 ರ ಸುಮಾರಿನಲ್ಲಿ ತೆರಳಿದ್ದು,ಮೀನು ಅಂಗಡಿಗೆ ನುಗ್ಗಿ ಮೀನು ಸೇವಿಸುತ್ತಿದ್ದವರ ಮೇಲೆ ಮನ ಬಂದಂತೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲೇ ಮೂವರು ಮಚ್ಚಿನೇಟಿನಿಂದ ಗಾಯಗೊಂಡಿದ್ದಾರೆ. ಶ್ರೀನಿವಾಸ್ ಮತ್ತು ರಘುನಂದನ್ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವ ಉದ್ದೇಶಕ್ಕಾಗಿ ಬೈಕ್ಗಳಲ್ಲಿ ಬಂದು ಸಿಕ್ಕ ಸಿಕ್ಕ ಸಾರ್ವಜನಿಕರ ಮೇಲೆ ಅಪರಿಚಿತರ ಗುಂಪು ದಾಳಿ ಮಾಡಿದೆ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.ಸುದ್ದಿ ತಿಳಿಯುತ್ತಿದ್ದಂತೆ ಸುಬ್ರಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಘಟನಾ ಸ್ಥಳಗಳ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿಗಳನ್ನಾಧರಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
