ಬೆಂಗಳೂರು, ಸೆ.21- ಪಶ್ಚಿಮಘಟ್ಟಗಳ ಕಸ್ತೂರಿರಂಗನ್ ಸಮಿತಿ ವರದಿ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಆರಂಭವಾದ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಮತ್ತು ಪ್ರತಿಭಟನೆಗೆ ವೇದಿಕೆಯಾಯಿತು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕಸ್ತೂರಿರಂಗನ್ ವರದಿ ವಿಚಾರವನ್ನು ಪ್ರಸ್ತಾಪಿಸಿದ ಬಳಿಕವೂ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಸಭಾಪತಿ ಕಲಾಪವನ್ನು 10 ನಿಮಿಷ ಮುಂದೂಡಿದರು.
ಕಸ್ತೂರಿರಂಗನ್ ವರದಿಯನ್ನು ಒಪ್ಪುವುದಿಲ್ಲ ಎಂಬ ನಿಲುವನ್ನು ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರಗಳ ಮೂಲಕ ತಿಳಿಸಿದೆ.. ಕೇಂದ್ರ ಸರ್ಕಾರ ಪದೇಪದೇ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದು, ಇದೀಗ ಹೊರಡಿಸಿರುವ ಕರಡು ಅಧಿಸೂಚನೆಗೂ ರಾಜ್ಯ ಸರ್ಕಾರದ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಈ ಕಾರಣಕ್ಕಾಗಿಯೇ ವಿಶೇಷ ಅಧಿವೇಶನದಲ್ಲಿ ವಿಚಾರವನ್ನು ಚರ್ಚೆಗೆ ತಂದಿದ್ದೇವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ರೈತರು, ಸ್ಥಳೀಯ ಜನರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿರುವುದರಿಂದ, ಆ ಎಲ್ಲ ಅಭಿಪ್ರಾಯಗಳನ್ನೂ ಸದನದಲ್ಲಿ ಸಮಗ್ರವಾಗಿ ಚರ್ಚಿಸಬೇಕಾಗಿದೆ ಎಂದು ಪರಮೇಶ್ವರ್ ಹೇಳಿದರು. ವಿಶೇಷ ಅಧಿವೇಶನದಲ್ಲಿ ವರದಿ ಕುರಿತು ಸಮಗ್ರ ಚರ್ಚೆ ನಡೆಸುವ ಉದ್ದೇಶವಿದೆ ಎಂದು ಅವರು ಈ ಹಿಂದೆ ಕೂಡ ಹೇಳಿದ್ದರು ಎಂದರು.
ಈ ವೇಳೆ, ಪರಮೇಶ್ವರ್ ಅವರು ಪ್ರತಿಪಕ್ಷಗಳ ನಿಲುವನ್ನೇ ಪ್ರಶ್ನಿಸಿ, ವಿಪಕ್ಷಗಳು ಕಸ್ತೂರಿರಂಗನ್ ವರದಿಯ ಪರವೋ ಅಥವಾ ವಿರೋಧವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷಗಳು ತಮ ನಿಲುವನ್ನು ಹೇಳದಿದ್ದರೆ, ಜನರಿಗೆ ಅವರು ವರದಿಯ ಪರವಾಗಿದ್ದಾರೆ ಎಂಬ ಸಂದೇಶ ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು. ಈ ಹೇಳಿಕೆ ಸದನದಲ್ಲಿ ಮತ್ತಷ್ಟು ರಾಜಕೀಯ ಬಿಸಿ ಏರಲು ಕಾರಣವಾಯಿತು.
ವಿಪಕ್ಷದಿಂದ ತೀವ್ರ ಆಕ್ಷೇಪ
ಪರಮೇಶ್ವರ್ ಅವರ ಪ್ರಸ್ತಾಪದ ನಡುವೆಯೇ ವಿಪಕ್ಷ ಸದಸ್ಯರು ಕಸ್ತೂರಿರಂಗನ್ ವರದಿಗೆ ತಮ ವಿರೋಧವನ್ನು ವ್ಯಕ್ತಪಡಿಸಿದರು. ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು.
ಬಿಜೆಪಿ ನಾಯಕ ಸಿ.ಟಿ. ರವಿ ಅವರು ಕಸ್ತೂರಿರಂಗನ್ ವರದಿ ಹಾಗೂ ಅದರ ಹಿನ್ನೆಲೆಯ ಕುರಿತು ಕಾಂಗ್ರೆಸ್ ವಿರುದ್ಧ ಟೀಕಾತಕ ಹೇಳಿಕೆ ನೀಡಿದರು. ವರದಿಯ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸಿದ ಅವರು, ಈ ಕುರಿತು ವಿಷಾದ ವ್ಯಕ್ತಪಡಿಸಬೇಕು ಎಂಬ ಅಭಿಪ್ರಾಯವನ್ನು ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ವ್ಯಕ್ತಪಡಿಸಿದರು.ಇದರ ನಡುವೆ ಸದನದಲ್ಲಿ ಘೋಷಣೆಗಳು ಮುಂದುವರಿದಿದ್ದರಿಂದ ಕಲಾಪದ ಸಹಜ ಪ್ರಕ್ರಿಯೆಗೆ ಅಡ್ಡಿಯಾಯಿತು.
